ದೆಹಲಿಯಲ್ಲಿ ಕೊರೊನಾ ಸ್ಫೋಟ- ಕೇಜ್ರಿ ಸರ್ಕಾರಕ್ಕೆ ಕೇಂದ್ರದ ನೆರವು

Public TV
3 Min Read

– ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರುತ್ತಿರುವ ಕೊರೊನಾ ಸೋಂಕು ಹರಡುವಿಕೆ ತಡೆಯಲು ಮೂರು ಪಟ್ಟು ಪರೀಕ್ಷೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ದೆಹಲಿಯಲ್ಲಿ ರಾಕೆಟ್ ವೇಗದಲ್ಲಿ ಸೋಂಕು ಹಬ್ಬುತ್ತಿರುವ ಹಿನ್ನೆಲೆ ಇಂದು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಏರ್ಪಡಿಸಾಗಿತ್ತು. ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನೀಲ್ ಬೈಜಾಲ್, ಸಿಎಂ ಅರವಿಂದ್ ಕೇಜ್ರಿವಾಲ್, ಆರೋಗ್ಯ ಸಚಿವ ಸತ್ಯಂದ್ರ ಜೈನ್, ಡಿಸಿಎಂ ಮನೀಷ್ ಸಿಸೊಡಿಯಾ ಹಾಗೂ ದೆಹಲಿ ತುರ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಏಮ್ಸ್ ಹಿರಿಯ ವೈದ್ಯಾಧಿಕಾರಿಗಳು ಭಾಗಿಯಾಗಿದ್ದರು.

ಸುಧೀರ್ಘ ಸಭೆ ಬಳಿಕ ದೆಹಲಿಯಲ್ಲಿ ಕೊರೊನಾ ತಡೆಗೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೊರೊನಾ ಪತ್ತೆಗಾಗಿ ಪರೀಕ್ಷೆಗಳನ್ನು ಹೆಚ್ಚಿಸುವ ಮತ್ತು ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಒದಗಿಸಿಕೊಡುವ ಭರವಸೆಯನ್ನು ಕೇಂದ್ರ ಸರ್ಕಾರ ದೆಹಲಿ ಸರ್ಕಾರಕ್ಕೆ ನೀಡಿದೆ.

ಮುಂದಿನ ಎರಡು ದಿನಗಳಲ್ಲಿ ದೆಹಲಿಯಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಪರೀಕ್ಷೆಗಳನ್ನು ಹೆಚ್ಚಿಸುವುದು ಮತ್ತು ಮುಂದಿನ ಆರು ದಿನಗಳಲ್ಲಿ ಮೂರು ಪಟ್ಟು ಟೆಸ್ಟಿಂಗ್ ನಡೆಯಲು ನಿರ್ಧರಿಸಲಾಗಿದೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ಮಾಡಿದ್ದು, ಪ್ರತಿ ಮನೆಗೆ ತೆರಳಿ ಪರೀಕ್ಷೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ದೆಹಲಿಯಲ್ಲಿ ಆಸ್ಪತ್ರೆ ಮತ್ತು ಬೆಡ್ ಗಳ ಕೊರತೆ ನೀಗಿಸಲು 500 ಕೊರೊನಾ ಬೆಡ್ ಗಳಾಗಿ ಮಾರ್ಪಾಡಿಸಿದ ರೈಲ್ವೆ ಬೋಗಿಗಳನ್ನು ನೀಡಲು ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ ಸೂಚಿಸಿದೆ. ಅಲ್ಲದೆ ಎಲ್ಲ ಖಾಸಗಿ ಆಸ್ಪತ್ರೆಯಲ್ಲಿ ಶೇ.60ರಷ್ಟು ಬೆಡ್ ಗಳನ್ನು ಕೊರೊನಾಗೆ ಮೀಸಲಿಡಲಿದ್ದು, ದರ ಪಟ್ಟಿಗೆ ಸಮಿತಿ ರಚನೆ ಮಾಡಿದೆ.

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಕೇಂದ್ರ ಇನ್ನೂ ಐದು ಹಿರಿಯ ಅಧಿಕಾರಿಗಳನ್ನು ದೆಹಲಿ ಸರ್ಕಾರಕ್ಕೆ ನಿಯೋಜಿಸಿದೆ. ಅಗತ್ಯ ಸಂಪನ್ಮೂಲಗಳಾದ ಆಮ್ಲಜನಕ ಸಿಲಿಂಡರ್‍ಗಳು, ವೆಂಟಿಲೇಟರ್‍ಗಳು, ಪಲ್ಸ್ ಆಕ್ಸಿಮೀಟರ್‍ಗಳು ಸೇರಿದಂತೆ ಎಲ್ಲ ಅಗತ್ಯಗಳನ್ನು ಪೂರೈಸುವುದಾಗಿ ಕೇಂದ್ರ ದೆಹಲಿ ಸರ್ಕಾರಕ್ಕೆ ಭರವಸೆ ನೀಡಿದ್ದು, ಅಂತ್ಯಕ್ರಿಯೆಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಸಹ ನಿರ್ಧರಿಸಿದೆ.

ಸಭೆ ಬಳಿಕ ಮಾತನಾಡಿದ ಸಿಎಂ ಅರವಿಂದ ಕೇಜ್ರಿವಾಲ್, ಇದೊಂದು ಉತ್ತಮ ಸಭೆ ಸಾಕಷ್ಟು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೆಹಲಿ ಲಾಕ್‍ಡೌನ್ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *