ದುಬಾರಿ ಬೆಲೆ ಇರಲ್ಲ, ಜನರ ಕೈಗೆಟುಕುವ ದರದಲ್ಲಿ ಕೊವಾಕ್ಸಿನ್‌ ಲಸಿಕೆ – ಸುಚಿತ್ರಾ ಎಲ್ಲಾ

Public TV
1 Min Read

– ಪಬ್ಲಿಕ್‌ ಟಿವಿ ಜೊತೆ ಸುಚಿತ್ರಾ ಕೆ ಎಲ್ಲಾ ಮಾತು
– 3, 4 ತಿಂಗಳಲ್ಲಿ ಲಸಿಕೆ ಲಭ್ಯ

ಬೆಂಗಳೂರು: ನಾವು ದುಬಾರಿ ಬೆಲೆಯ ಲಸಿಕೆ ತಯಾರಿಸುವುದಿಲ್ಲ. ಜನರ ಕೈಗೆಟುಕುವ ದರದಲ್ಲಿ ಕೊವಾಕ್ಸಿನ್‌ ಲಸಿಕೆ ತಯಾರಿಸಲಾಗುವುದು ಎಂದು ಭಾರತ್‌ ಬಯೋಟೆಕ್‌ ಕಂಪನಿಯ ಸಹ ಸಂಸ್ಥಾಪಕಿ ಸುಚಿತ್ರಾ ಕೆ ಎಲ್ಲಾ ತಿಳಿಸಿದ್ದಾರೆ.

ಪಬ್ಲಿಕ್‌ ಟಿವಿಯ ಬಿಗ್‌ ಬುಲೆಟಿನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 30-40 ಡಾಲರ್‌ ಬೆಲೆಯ ಲಸಿಕೆಯನ್ನು ನಾವು ತಯಾರಿಸುವುದಿಲ್ಲ. ಭಾರತದ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಸಿಗುವ ನಿಟ್ಟಿನಲ್ಲಿ ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಈಗ ಮೂರನೇ ಪ್ರಯೋಗ ನಡೆಯುತ್ತಿದೆ. ಮುಂದಿನ 3-4 ತಿಂಗಳ ಒಳಗಡೆ ಲಸಿಕೆ ಸಿಗುವ ವಿಶ್ವಾಸವಿದೆ. ಭಾರತ ವಿಶ್ವಕ್ಕೆ ಕೊರೊನಾ ಲಸಿಕೆಯನ್ನು ರಫ್ತು ಮಾಡಲಿದೆ ಎಂದು ವಿವರಿಸಿದರು.

ಒಮ್ಮೆ ಲಸಿಕೆ ತೆಗದುಕೊಂಡರೆ ಮತ್ತೆ ಕೊರೊನಾ ಬರುತ್ತಾ ಎಂಬ ಪ್ರಶ್ನೆಗೆ, ನಮ್ಮ ಲಸಿಕೆಯನ್ನು 2 ಬಾರಿ ತೆಗೆದುಕೊಳ್ಳಬೇಕಾಗುತ್ತದೆ. ಒಂದು ಬಾರಿ ಲಸಿಕೆ ತೆಗೆದುಕೊಂಡ 28 ದಿನಗಳ ನಂತರ ಮತ್ತೊಮ್ಮೆ ತೆಗೆದುಕೊಳ್ಳಬೇಕು. ಜೀವನ ಪೂರ್ತಿ ಈ ಲಸಿಕೆ ರಕ್ಷಣೆ ನೀಡುತ್ತದೆ ಎದು ಈಗಲೇ ಹೇಳಲು ಬರುವುದಿಲ್ಲ. ಯಾಕೆಂದರೆ ಕೊರೊನಾ ವೈರಸ್‌ ರೂಪಾಂತರಗೊಳ್ಳುತ್ತಿರುತ್ತದೆ ಎಂದು ವಿವರಿಸಿದರು.

ಬೆಂಗಳೂರು ಮತ್ತು ಬೆಳಗಾವಿ ಆಸ್ಪತ್ರೆಯ ಜೊತೆ ಸೇರಿ ನಾವು ಪ್ರಯೋಗ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ 2 ಸಾವಿರ ಜನರ ಮೇಲೆ ಪ್ರಯೋಗ ಮಾಡಬೇಕಿದೆ. ಕರ್ನಾಟಕದಲ್ಲಿ ಸ್ವಯಂಸೇವಕರ ಸಂಖ್ಯೆ ಕಡಿಮೆ ಇದೆ ಎಂದು ಈ ವೇಳೆ ತಿಳಿಸಿದರು.

ಐಸಿಎಂಆರ್‌ ಜೊತೆ ಸೇರಿ ಕೊರೊನಾ ನಿಯಂತ್ರಣವನ್ನು ಭಾರತ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಸರ್ಕಾರ ನಮಗೆ ಸಹಕಾರ ನೀಡುತ್ತಿದೆ. ಭಾರತದ ಎಲ್ಲ ಜನರಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯುತ್ತಿದೆ. ವಿಶ್ವಕ್ಕೆ ಭಾರತದಿಂದ ಲಸಿಕೆ ರಫ್ತು ಆಗಲಿದೆ.ಭಾರತ ಲಸಿಕೆ ತಯಾರಿಸುವ ಹಬ್‌ ಆಗಬೇಕು ಎಂದು ಅವರು ಹೇಳಿದರು.

ಪಬ್ಲಿಕ್‌ ಟಿವಿಯ ಮುಖ್ಯಸ್ಥ ಎಚ್‌.ಆರ್‌.ರಂಗನಾಥ್‌ ಜೊತೆ ಭಾರತ್‌ ಬಯೋಟೆಕ್‌ ಕಂಪನಿಯ ಸಹ ಸಂಸ್ಥಾಪಕಿ ಸುಚಿತ್ರಾ ಕೆ ಎಲ್ಲಾ ಮಾತನಾಡಿರುವ ವಿಡಿಯೋ ಇಲ್ಲಿ ನೀಡಲಾಗಿದ್ದು ವೀಕ್ಷಿಸಬಹುದು.

 

Share This Article
Leave a Comment

Leave a Reply

Your email address will not be published. Required fields are marked *