ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆ: ಸಿಟಿ ರವಿ

Public TV
2 Min Read

– ಅಯೋಧ್ಯೆಯಲ್ಲಿ ವೈಭವ ಮರುಕಳಿಸಿದೆ

ಚಿಕ್ಕಮಗಳೂರು: ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತಿರಣೆ ಮಾಡುವ ಬಹುತೇಕ ಸಾಧ್ಯತೆಗಳಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಬಿಂಡಿಗೆ ದೇವಿರಮ್ಮನ ಬೆಟ್ಟದಲ್ಲಿ ದೇವಿರಮ್ಮನ ದರ್ಶನದ ಬಳಿಕ ಮಾತನಾಡಿದ ಅವರು, ವರಿಷ್ಠರು ಬಿಹಾರದ ವಿದ್ಯಾಮಾನಗಳಲ್ಲಿ ತೊಡಗಿಕೊಂಡಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ಸಾಧ್ಯವಾಗಿಲ್ಲ. ಹಬ್ಬದ ಬಳಿಕ ಸಿಎಂ ದೆಹಲಿಗೆ ಹೋಗಿ ಸಮಾಲೋಚನೆ ನಡೆಸಿ, ವಿಸ್ತರಣೆ ಮಾಡಲಿದ್ದಾರೆ. ಸಿಎಂ ಮನದಲ್ಲಿ ಪುನರ್ ರಚನೆಯ ಯೋಜನೆ ಇದೆ. ಪುನರ್ ರಚನೆಯೋ ಅಥವಾ ವಿಸ್ತರಣೆಯೋ ಎಂಬುದನ್ನು ವರಿಷ್ಠರ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಅಲ್ಲದೆ ಶೀಘ್ರದಲ್ಲೇ ಚಿಕ್ಕಮಗಳೂರಿಗೆ ಉಸ್ತುವಾರಿ ಸಚಿವರು ಬರುತ್ತಾರೆ ಎಂದರು.

ಬಿಹಾರದಲ್ಲಿ ಡಬಲ್ ಎಂಜಿನ್ ಸರ್ಕಾರ: ಬಿಹಾರದಲ್ಲಿ ನಾಲ್ಕನೇ ಬಾರಿಗೆ ನಿತಿಶ್ ಕುಮಾರ್ ಸರ್ಕಾರ ಜನಮನ್ನಣೆ ಗಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅವರು ಅದನ್ನು ಸಾಧಿಸಿದ್ದಾರೆ. ಪ್ರಧಾನಿ ಹಾಗೂ ನಿತಿಶ್ ಕುಮಾರ್ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದಿದೆ. ಬಿಹಾರ ಜನರ ಕನಸನ್ನ ನನಸು ಮಾಡಲು ಶಕ್ತಿ ತುಂಬುವಂತಹ ಕೆಲಸವನ್ನು ಎನ್‍ಡಿಎ ಮಾಡುತ್ತದೆ ಎಂದರು.

ಮೂರು ರಾಜ್ಯಗಳ ಉಸ್ತುವಾರಿ ಕುರಿತಂತೆ ಪಕ್ಷ ಕೊಡುವ ಜವಾಬ್ದಾರಿಗೆ ಜೀವ ತುಂಬುವ ಕೆಲಸ ಮಾಡುತ್ತೇನೆ. ಈಗ ಮಹಾರಾಷ್ಟ್ರ, ಗೋವಾ ಹಾಗೂ ತಮಿಳುನಾಡಿನ ಸಂಘಟನೆಯ ಉಸ್ತುವಾರಿ ವಹಿಸಿದೆ. ಬೇರೆಲ್ಲಾ ಪದಾಧಿಕಾರಿಗಳಿಗೆ ಒಂದು, ಎರಡು, ಮೂರು ರಾಜ್ಯಗಳ ಜವಾಬ್ದಾರಿ ಕೊಟ್ಟಿದ್ದಾರೆ. ಜೊತೆಗೆ ರಾಷ್ಟ್ರೀಯ ಅಧ್ಯಕ್ಷರ ಪ್ರವಾಸದ ಹೊಣೆಗಾರಿಕೆಯನ್ನ ಈಶಾನ್ಯ, ಪಶ್ಚಿಮ ಹಾಗೂ ದಕ್ಷಿಣ ಭಾರತದ ಹೊಣೆಗಾರಿಕೆಯನ್ನೂ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಕೆಲ ಯೋಜನೆಗಳ ಅನುಷ್ಠಾನದ ಕುರಿತಂತೆ ಸಂಘಟನೆಯಿಂದ ವಹಿಸಬೇಕಾದ ಜಾಗೃತಿಯ ಜವಾಬ್ದಾರಿಗಳನ್ನೂ ಕೊಟ್ಟಿದ್ದಾರೆ. ಚಿಕ್ಕಮಗಳೂರು ಹಾಗೂ ಕರ್ನಾಟಕದಲ್ಲಿ ಕಾರ್ಯಕರ್ತನಾಗಿ ಗಳಿಸಿರುವ ಅನುಭವವನ್ನ ಸಂಘಟನೆ ಕಟ್ಟಲು ಉಪಯೋಗಿಸಿರುವ ಮಾನದಂಡಗಳನ್ನಿಟ್ಟುಕೊಂಡು ನಮಗೆ ವಹಿಸಿರುವ ರಾಜ್ಯದಲ್ಲಿ ಕಾರ್ಯಕರ್ತರು ಜನನಾಯಕರಾಗಿ ಹೊರಬರುವಂತೆ, ಜನನಾಯಕದ ಮೂಲಕ ರಾಜ್ಯದ ನೇತೃತ್ವ ವಹಿಸುವಂತ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು.

ಅಯೋಧ್ಯೆಯಲ್ಲಿ ಮರುಕಳಿಸಿದ ವೈಭವ: 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಮತ್ತೆ ಸಂಭ್ರಮ ನೆಲೆಸಿದೆ. ಶ್ರೀರಾಮನ ಪಟ್ಟದ ಮಹೋತ್ಸವದ ಕಾಲಘಟ್ಟದಲ್ಲಿ ವರ್ಣನೆಯನ್ನ ಸಾಕಾರಗೊಳ್ಳುವಂತ ಕೆಲಸವನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಾಡುತ್ತಿದೆ. ಜಗತ್ತಿನ ಜನ ಸಂಭ್ರಮಿಸಿದ್ದಾರೆ. ಇದನ್ನೇ ಪುನರುತ್ಥಾನ ಎನ್ನುವುದು. ಸಾವಿರಾರು ವರ್ಷಗಳಿಂದ ಬಹುತೇಕರು ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸಿದರು. ನಾವು ಯಾರಿಗೂ ಕೆಡುಕು ಮಾಡಿದವರಲ್ಲ. ಎಲ್ಲವನ್ನೂ ಸ್ವೀಕಾರ ಮಾಡಿದವರು. ಜಗತ್ತಿನ ಯಾವ ನೆಲದಲ್ಲೂ ಕೂಡ ಅಣುರೇಣು ತೃಣಕಾಷ್ಟಗಳಲ್ಲೂ ಭಗವಂತ ಇದ್ದಾನೆಂಬ ಸಂದೇಶವನ್ನಾಗಲಿ, ಎಲ್ಲ ಕಡೆಯಿಂದಲೂ ಒಳ್ಳೆಯ ಗುಣಗಳೇ ಹರಿದು ಬರಲೆಂಬ ಪ್ರಾರ್ಥನೆಯಾಗಲಿ ಹಾಗೂ ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯಾಗಲಿ ಜಗತ್ತಿನಲ್ಲಿ ಎಲ್ಲೂ ಇಲ್ಲ. ಆದರೂ ಈ ಸಂಸ್ಕೃತಿಯನ್ನು ನಾಶ ಮಾಡುವಂತಹ ಪ್ರಯತ್ನ ಸಾವಿರಾರು ವರ್ಷಗಳಿಂದ ನಡೆಯಿತು. ಆ ಕಾರಣದಿಂದಲೇ ಅಯೋಧ್ಯೆಯ ವೈಭವವನ್ನು ಕಸಿಯುವ ಕೆಲಸ ಮಾಡಿದ್ದರು. ಈಗ ಆ ವೈಭವ ಮತ್ತೆ ಮರುಕಳಿಸಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *