ದೀಪಾವಳಿಗೆ ಹೊಸ ರಂಗು ತುಂಬಲಿದೆ ‘ವಿಂಡೋ ಸೀಟ್’ ಟೀಸರ್!

Public TV
2 Min Read

– ಕಿಚ್ಚ ಕ್ರಿಯೇಷನ್ಸ್ ನಲ್ಲಿ ಮಸ್ತ್ ಮೇಕಿಂಗ್ ವೀಡಿಯೋ

ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಈಗಾಗಲೇ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್‍ನಿಂದ ವಿಂಡೋ ಸೀಟ್ ಹಂಗಾಮಾ ಶುರುವಾಗಿದೆ. ವಿಂಡೋ ಸೀಟ್‍ನಲ್ಲಿ ಚೇತೋಹಾರಿಯಾದದ್ದೇನೋ ಇದೆ ಎಂಬ ಭರವಸೆಯನ್ನು ಶೀತಲ್ ಪ್ರೇಕ್ಷಕರ ಮನಸಲ್ಲಿ ಭದ್ರವಾಗಿಯೇ ನೆಲೆಯೂರಿಸಿದ್ದಾರೆ. ಈ ಸಿನಿಮಾದ ಮುಂದಿನ ಅಪ್‍ಡೇಟ್ಸ್ ಗಾಗಿ ಕಾದು ಕೂತಿದ್ದವರಿಗೀಗ ಚಿತ್ರತಂಡ ಡಬಲ್ ಧಮಾಕಾವನ್ನೇ ಕೊಡಮಾಡಿದೆ. ಈ ಮೂಲಕ ಮತ್ತೆ ವಿಂಡೋ ಸೀಟ್ ದೀಪಾವಳಿಯ ಪ್ರಭಾವಳಿಗೆ ಹೊಸ ಮೆರುಗು ನೀಡಲು ಅಣಿಗೊಂಡಿದೆ.

ಇತ್ತೀಚೆಗೆ ಲಾಂಚ್ ಆಗಿದ್ದ ಫಸ್ಟ್ ಲುಕ್‍ನಲ್ಲಿಯೇ ಒಂದಷ್ಟು ಅಂಶಗಳು ಪ್ರೇಕ್ಷಕರನ್ನ ತಲುಪಿಕೊಂಡಿದ್ದವು. ಆ ಘಳಿಗೆಯಲ್ಲಿ ಶೀಘ್ರದಲ್ಲಿಯೇ ಟೀಸರ್ ಲಾಂಚ್ ಮಾಡೋದಾಗಿಯೂ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿಕೊಂಡಿದ್ದರು. ಅದಕ್ಕೀಗ ಅವರು ದೀಪಾವಳಿಯಂದು ಮುಹೂರ್ತ ನಿಗದಿ ಮಾಡಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿಯೇ ಘೋಷಿಸಿದೆ. ಅದಲ್ಲದೇ ಇಂದು ಸಂಜೆ ಆರು ಗಂಟೆಗೆ ಸರಿಯಾಗಿ ಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ವಿಂಡೋ ಸೀಟ್‍ನ ಮಸ್ತ್ ಆಗಿರೋ ಮೇಕಿಂಗ್ ವೀಡಿಯೋ ಕೂಡಾ ಬಿಡುಗಡೆಗೊಂಡಿದೆ. ಅದರಲ್ಲಿ ಸದರಿ ಸಿನಿಮಾ ಬಗೆಗಿನ ಮತ್ತೊಂದಷ್ಟು ರಸವತ್ತಾದ ಹೊಳಹುಗಳು ಜಾಹೀರಾಗಿದೆ.

ಕೊರೊನೋತ್ತರ ಕಾಲದಲ್ಲಿ ಚಿತ್ರರಂಗಕ್ಕೆ ಹೊಸಾ ಆವೇಗ ನೀಡಬಲ್ಲ ಭರವಸೆ ಮೂಡಿಸಿರುವ ಒಂದಷ್ಟು ಸಿನಿಮಾಗಳಿದ್ದಾವೆ. ಆ ಯಾದಿಯಲ್ಲಿ ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬಂದಿರುವ ವಿಂಡೋ ಸೀಟ್ ಕೂಡಾ ಸೇರಿಕೊಂಡಿದೆ. ಇದೀಗ ಲಾಂಚ್ ಆಗಿರೋ ಮೇಕಿಂಗ್ ವೀಡಿಯೋದಲ್ಲಿ ವಿಂಡೋ ಸೀಟ್‍ನ ಕಥಾ ಹಂದರದ ಝಲಕ್‍ಗಳೂ ಕೂಡಾ ಸ್ಪಷ್ಟವಾಗಿ ಕಾಣಿಸಿದೆ. ಒಂದೊಳ್ಳೆ ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್ ಕಥಾನಕವನ್ನು ಶೀತಲ್ ಶೆಟ್ಟಿ ಕಟ್ಟಿ ಕೊಟ್ಟಿದ್ದಾರೆಂಬುದೂ ಸ್ಪಷ್ಟವಾಗಿದೆ. ಅದಲ್ಲದೇ ನಿರೂಪ್ ಭಂಡಾರಿ ಇಲ್ಲಿ ಯಾವ್ಯಾವ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿದ್ದಾರೆಂಬ ಪ್ರೇಕ್ಷಕರ ಕ್ಯೂರಿಯಾಸಿಟಿ ಕೂಡಾ ಕೊಂಚ ತಣಿದಂತಾಗಿದೆ. ಒಟ್ಟಾರೆಯಾಗಿ ಈ ಮೇಕಿಂಗ್ ವೀಡಿಯೋ ಟೀಸರ್ ಆಗಿ ತದೇಕಚಿತ್ತದಿಂದ ಕಾಯುವಂತೆ ಮಾಡುವಷ್ಟು ಶಕ್ತವಾಗಿ ಮೂಡಿ ಬಂದಿದೆ.

ವಿಂಡೋ ಸೀಟ್ ಈ ಪರಿಯಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲು, ಅದ್ಯಾವತ್ತು ರಿಲೀಸಾಗುತ್ತೆ ಅಂತ ಜಾತಕ ಪಕ್ಷಿಗಳಂತೆ ಕಾಯುವಂತಾಗಿರಲು ನಿಖರವಾದ ಕಾರಣಗಳಿವೆ. ಮೊದಲನೆಯದಾಗಿ ನಿರ್ದೇಶಕಿ ಶೀತಲ್ ಈವರೆಗಿನ ಕೆಲಸ ಕಾರ್ಯಗಳಲ್ಲಿಯೇ ಆ ರೀತಿಯಲ್ಲೊಂದು ಭರವಸೆ ಮೂಡಿಸಿದ್ದಾರೆ. ಇನ್ನುಳಿದಂತೆ ಕಥೆ, ಪಾತ್ರವರ್ಗ, ಒಂದಿಡೀ ತಂಡವನ್ನು ಅವರು ಬಲು ಜಾಣ್ಮೆಯಿಂದಲೇ ಆಯ್ಕೆ ಮಾಡಿಕೊಂಡಿದ್ದಾರೆ. ಒಂದಿಡೀ ಪಾತ್ರವರ್ಗ ಮತ್ತು ತಂಡ ಅದೆಂಥಾ ಉತ್ಸಾಹದಿಂದ ಈ ಸಿನಿಮಾವನ್ನು ರೂಪಿಸಿದೆ. ಅದರ ಬಗ್ಗೆ ಯಾವ ಥರದ ಭರವಸೆಯಿಟ್ಟುಕೊಂಡಿದೆ ಅನ್ನೋದೂ ಈ ಮೇಕಿಂಗ್ ವೀಡಿಯೋದಲ್ಲಿ ಸ್ಪಷ್ಟವಾಗಿಯೇ ಕಾಣಿಸಿದೆ.

Share This Article
Leave a Comment

Leave a Reply

Your email address will not be published. Required fields are marked *