ದಿಶಾ ಸಾಲಿಯನ್ ಗೆಳೆಯನಿಗೆ ಭದ್ರತೆ ನೀಡಿ – ಅಮಿತ್ ಶಾಗೆ ನಿತೇಶ್ ರಾಣೆ ಪತ್ರ

Public TV
3 Min Read

– ದಿಶಾ, ಸುಶಾಂತ್ ಸಾವಿಗೂ ಲಿಂಕ್ ಇದೆ
– ದೊಡ್ಡ ವ್ಯಕ್ತಿಗಳಿಂದ ಆತನ ಜೀವಕ್ಕೆ ಅಪಾಯವಿದೆ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಪ್ರಿಯಕರನಿಗೆ ಭದ್ರತೆ ನೀಡಬೇಕೆಂದು ಮುಂಬೈ ಬಿಜೆಪಿ ಶಾಸಕ ನಿತೇಶ್ ರಾಣೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ದಿಶಾ ಸಾಲಿಯನ್ ಕಳೆದ ಜೂನ್ 8 ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮುಂಬೈನ ಮಲಾಡ್ ಪ್ರದೇಶಲ್ಲಿರುವ ಮನೆಯ 14ನೇ ಮಹಡಿಯಿಂದ ಕಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಐದು ದಿನಗಳ ನಂತರ ಜೂನ್ 14ರಂದು ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎರಡು ಸಾವಿಗೂ ಸಂಬಂಧವಿದೆ ಎನ್ನಲಾಗಿದೆ.

ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಎಂಎಲ್‍ಎ ನಿತೇಶ್ ರಾಣೆ, ದಿಶಾ ಸಾವನ್ನಪ್ಪಿದ ದಿನ ಅವಳ ಗೆಳೆಯ ರೋಹನ್ ರೈ ಆಕೆಯ ಜೊತೆಯಲ್ಲಿ ಇದ್ದು, ಆತನಿಗೆ ಕೆಲ ಸೂಕ್ಷ್ಮ ವಿಚಾರಗಳು ಗೊತ್ತಿದೆ. ಆದರೆ ಆತ ಯಾವುದೋ ಪ್ರಭಾವಿ ವ್ಯಕ್ತಿಗಳಿಗೆ ಭಯಪಟ್ಟು ಯಾವ ವಿಚಾರವನ್ನು ಹೊರಗೆ ಹೇಳುತ್ತಿಲ್ಲ. ಆತನಿಗೆ ಭರವಸೆ ಮತ್ತು ಭದ್ರತೆ ಬೇಕಿದೆ. ಹೀಗಾಗಿ ಅವನಿಗೆ ಭದ್ರತೆ ನೀಡಿ ಎಂದು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ದಿಶಾ ಸಾಲಿಯನ್ ಸಾವಿಗೂ ಮತ್ತು ಸುಶಾಂತ್ ಸಿಂಗ್ ಸಾವಿಗೂ ಲಿಂಕ್ ಇದೆ. ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಹೀಗಾಗಿಯೇ ರೋಹನ್ ಮುಂಬೈ ಬಿಟ್ಟು ಹೋಗಿದ್ದಾನೆ. ಆತನನ್ನು ಯಾರೋ ಬಲವಂತವಾಗಿ ಮುಂಬೈ ಬಿಟ್ಟು ಹೋಗುವಂತೆ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಆತ ಮುಂಬೈಗೆ ಬರಲು ಹೆದರುತ್ತಿದ್ದಾನೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಇದರಲ್ಲಿ ಪ್ರಭಾವಶಾಲಿ ಜನರ ಒತ್ತಡವು ಇದೆ ಎಂದು ರಾಣೆ ಆರೋಪ ಮಾಡಿದ್ದಾರೆ.

ದಿಶಾ ಸಾಲಿಯನ್ ಪ್ರಕರಣದಲ್ಲಿ ಮುಂಬೈ ಪೊಲೀಸರು ನಾಟಕವಾಡುತ್ತಿದ್ದಾರೆ. ಆಕೆ ಪ್ರಕರಣದಲ್ಲಿ ಅತೀ ಮುಖ್ಯ ಸಾಕ್ಷಿಯಾದ ರೋಹನ್ ಅವರನ್ನು ಪೊಲೀಸರು ತನಿಖೆ ಮಾಡಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಸುಶಾಂತ್ ಕೇಸ್ ತನಿಖೆ ಮಾಡುತ್ತಿರುವ ಸಿಬಿಐ ಕೂಡ ರೋಹನ್ ಹೇಳಿಕೆಯನ್ನು ಪಡೆಯಬಹುದು. ಈ ಎರಡು ಪ್ರಕರಣಗಳಿಗೆ ಲಿಂಕ್ ಇದೆ. ಹೀಗಾಗಿ ಆತನಿಗೆ ಭದ್ರತೆ ಕೊಟ್ಟು ವಿಚಾರಣೆ ಮಾಡಬೇಕು. ಈ ವಿಚಾರದಲ್ಲಿ ನಾನು ಕೂಡ ಸಿಬಿಐಗೆ ಹೇಳಿಕೆ ನೀಡಲು ಸಿದ್ಧವಿದ್ದೇನೆ ಎಂದು ರಾಣೆ ಪತ್ರ ಬರೆದಿದ್ದಾರೆ. ಇದನ್ನು ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್

ಮೊದಲಿಗೆ ಸುಶಾಂತ್ ಜೊತೆ ಕೆಲಸ ಮಾಡುತ್ತಿದ್ದ ದಿಶಾ ಸಾಲಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ನಂತರ ಸುಶಾಂತ್ ಕೂಡ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದರು. ಹೀಗಾಗಿ ಈ ಪ್ರಕರಣಗಳು ಹಲವಾರು ತಿರುವುಗಳನ್ನು ಪಡೆದುಕೊಂಡಿವೆ. ಸುಶಾಂತ್ ಅನ್ನು ಕೊಲೆ ಮಾಡಲಾಗಿದೆ ಎಂದು ಕೆಲವರ ಆರೋಪಿಸಿದ್ದಾರೆ. ಇದರ ಮಧ್ಯೆ ಡ್ರಗ್ ಕೇಸ್ ಕೂಡ ಈ ಪ್ರಕರಣಕ್ಕೆ ತಳುಕು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್ ಕೂಡ ಆಗಿದ್ದಾರೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್, ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮಧ್ಯೆ ಜಟಾಪಟಿ ಮುಂದುವರೆದಿದೆ. ಜೊತೆಗೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಹಾರದಲ್ಲಿ ಬಿಜೆಪಿ ಪಕ್ಷ ಸುಶಾಂತ್ ಅವರ ಹೆಸರನ್ನು ತೆಗೆದುಕೊಂಡು ರಾಜಕೀಯ ಮಾಡಿದರೆ, ಇತ್ತ ಪಶ್ಚಿಮ ಬಂಗಾಳದಲ್ಲಿ ರಿಯಾ ಚಕ್ರವರ್ತಿಯನ್ನು ಬೆಂಬಲಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *