ದಾಖಲಾತಿ 9 ಸಾವಿರ, ಹಾಜರಾತಿ 300- ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ನೀರಸ ಪ್ರತಿಕ್ರಿಯೆ

Public TV
2 Min Read

ಉಡುಪಿ: ಕೊರೊನಾ ಸಾಂಕ್ರಾಮಿಕ ನಂತರ ರಾಜ್ಯಾದ್ಯಂತ ಕಾಲೇಜುಗಳು ಓಪನ್ ಆಗಿದ್ದು ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 9,072 ವಿದ್ಯಾರ್ಥಿಗಳ ಪೈಕಿ ಸುಮಾರು 300 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಬರುತ್ತಿದ್ದಾರೆ. ಈ ಪೈಕಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳದ್ದೇ ಸಿಂಹಪಾಲು.

ಕೊರೊನಾದ ನಡುವೆ ರಾಜ್ಯಾದ್ಯಂತ ಪದವಿ ಕಾಲೇಜುಗಳನ್ನು ಸರ್ಕಾರ ಆರಂಭಿಸಿದೆ. ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ತೀರಾ ನೀರಸ ಪ್ರತಿಕ್ರಿಯೆಯನ್ನು ತೋರಿದ್ದಾರೆ. ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳು ಸೇರಿ ಜಿಲ್ಲೆಯಲ್ಲಿ 55 ಕಾಲೇಜುಗಳಿವೆ. ಅಂತಿಮ ಪದವಿ ವಿಭಾಗದಲ್ಲಿ 9,072 ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಮಾಡಿಕೊಂಡಿದ್ದಾರೆ. ಈ ಪೈಕಿ ಕೇವಲ 307 ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದಾರೆ.

ಈ ಮೂಲಕ ರೆಗ್ಯುಲರ್ ಕ್ಲಾಸ್ ಬೇಡ, ನಮಗೆ ಮನಸ್ಸಿಲ್ಲ ಎಂಬೂದನ್ನು ಪ್ರದರ್ಶನ ಮಾಡಿದಂತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ 36 ಖಾಸಗಿ ಕಾಲೇಜಿನಲ್ಲಿ 3,766 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಕೇವಲ 38 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 9 ಸರ್ಕಾರಿ ಕಾಲೇಜುಗಳಿದ್ದು 2,829 ವಿದ್ಯಾರ್ಥಿಗಳ ಪೈಕಿ 232 ಮಂದಿ ಹಾಜರಾಗಿದ್ದಾರೆ.

ಅನುದಾನಿತ ಕಾಲೇಜುಗಳು ಲೆಕ್ಕಾಚಾರ ನೋಡೋದಾದರೆ ಜಿಲ್ಲೆಯ 10 ಅನುದಾನಿತ ಕಾಲೇಜಲ್ಲಿ 2,577 ವಿದ್ಯಾರ್ಥಿಗಳ ಪೈಕಿ ಕೇವಲ 37 ಜನ ಮಾತ್ರ ತರಗತಿಗೆ ಬಂದಿದ್ದಾರೆ. ಕೆಲ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿ ಬಾರದ ಉದಾಹರಣೆ ಇದೆ. ಜಿಲ್ಲೆಯಲ್ಲಿ 6,000 ವಿದ್ಯಾರ್ಥಿಗಳ ಕೊರೊನಾ ಟೆಸ್ಟ್ ಆಗಿದ್ದು, 7 ಜನರಲ್ಲಿ ಕೊರೊನಾ ಕಾಣಿಸಿದೆ. ಸಾಂಕ್ರಾಮಿಕ ರೋಗದ ಅಬ್ಬರ ಇಳಿಕೆಯಾದರೂ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಮನಸ್ಸು ಮಾಡುತ್ತಿಲ್ಲ. ಆನ್‍ಲೈನ್ ಕ್ಲಾಸಿಗೆ ಒಗ್ಗಿಕೊಂಡಂತೆ ಕಾಣುತ್ತಿದೆ.

ಕಳೆದ ಮೂರ್ನಾಲ್ಕು ತಿಂಗಳಿಂದ ಆನ್‍ಲೈನ್ ಮೂಲಕ ಪಾಠಗಳು ನಡೆಯುತ್ತಿದ್ದು, ಈಗ ಆಫ್‍ಲೈನ್ ಕ್ಲಾಸ್‍ಗಳು ಆರಂಭವಾಗಿದೆ. ಬೇರೆ ಅವಕಾಶಗಳು ಇಲ್ಲದ ಕಾರಣ ಅದಕ್ಕೆ ಒಗ್ಗಿ ಕೊಂಡಿದ್ದೆವು. ಈಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ತರಗತಿಗೆ ಹಾಜರಾಗಿದ್ದೇವೆ. ಆ ಸಂದರ್ಭದಲ್ಲಿ ಆಡಿಯೋ ಸಮಸ್ಯೆ ನೆಟ್‍ವರ್ಕ್ ಸಮಸ್ಯೆಗಳು ಇತ್ತು. ಕ್ಲಾಸ್‍ನಲ್ಲಿ ಡೌಟ್‍ಗಳಿದ್ದರೆ ನೇರವಾಗಿ ನಾವು ಪರಿಹರಿಸಿಕೊಳ್ಳಬಹುದು. ಆರೋಗ್ಯ ಸಮಸ್ಯೆಗಳು ಇದ್ದರೆ ಆನ್‍ಲೈನ್ ಮೂಲಕ ಶಿಕ್ಷಣ ಪಡೆದುಕೊಳ್ಳುವುದು ಒಳ್ಳೆಯದು. ನಮ್ಮ ಕ್ಲಾಸ್‍ನಲ್ಲಿ 150 ವಿದ್ಯಾರ್ಥಿಗಳು ಇದ್ದಾರೆ. ಆದರೆ ಈಗ 12 ಜನ ಮಾತ್ರ ತರಗತಿಗೆ ಹಾಜರಾಗಿದ್ದಾರೆ. ಆನ್‍ಲೈನ್ ಕ್ಲಾಸ್‍ಗಿಂತ ಆಫ್ ಲೈನ್ ಕ್ಲಾಸೆ ನಮಗೆ ಬೆಟರ್ ಅಂತ ಅನಿಸುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದೆ ಸರ್ಕಾರಿ ಮತ್ತು ಅನುದಾನಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರುವುದು ಅನಿವಾರ್ಯ ಆಗಿದೆ. ನಮ್ಮ ಕಾಲೇಜಿನಲ್ಲಿ ಮಾನವ ಸಂಪನ್ಮೂಲ ಜಾಸ್ತಿ ಇರುವುದರಿಂದ ಸೌಕರ್ಯಗಳು ಜಾಸ್ತಿ ಇರುವುದರಿಂದ ನೇರವಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ಸೋಮವಾರದ ನಂತರ ಮಕ್ಕಳ ಹಾಜರಾತಿ ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಜಿ ಶಂಕರ್ ಸರ್ಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಮಚಂದ್ರ ಅಡಿಗ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *