ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಅಭಿಮನ್ಯು? – ಅರ್ಜುನನಿಗೆ ನಿವೃತ್ತಿ ನಿಶ್ಚಿತ

Public TV
2 Min Read

ಮೈಸೂರು: ದಸರಾ ಗಜಪಡೆಯ ಕ್ಯಾಪ್ಟನ್ ಸ್ಥಾನದಿಂದ ಅರ್ಜುನ ಆನೆಗೆ ನಿವೃತ್ತಿ ಸಿಗುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ದಸರಾದಿಂದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗೋದು ಬಹುತೇಕ ನಿಶ್ಚಿತವಾಗಿದೆ. ಇದರ ನಡುವೆ ದಸರಾ ಗಜಪಡೆಗೂ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂಬ ಮಾತು ಶುರುವಾಗಿದೆ.

ಗಜಪಡೆಗೆ ಕಳೆದ ಐದು ವರ್ಷಗಳಿಂದ ಅರ್ಜುನ ಕ್ಯಾಪ್ಟನ್ ಆಗಿದ್ದ. ಅರ್ಜುನಿಗೆ ಈಗ 60 ವರ್ಷ. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ ಅರ್ಜನನ್ನು ಕ್ಯಾಪ್ಟನ್ ಶಿಪ್‍ನಿಂದ ಕೆಳಗೆ ಇಳಿಸುವುದು ಅನಿವಾರ್ಯ. ಅಲ್ಲಿಗೆ ಈ ಬಾರಿಯಿಂದ ದಸರಾ ಗಜಪಡೆಗೆ ಹೊಸ ಕ್ಯಾಪ್ಟನ್ ಬರುವುದು ನಿಶ್ಚಿತವಾದಂತೆ ಆಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮತ್ತಿಗೋಡು ಶಿಬಿರದಲ್ಲಿರುವ 54 ವರ್ಷದ ಅಭಿಮನ್ಯು ಆನೆ ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಆಗುವುದು ಬಹುತೇಕ ಖಚಿತವಾಗಿದೆ. 20 ವರ್ಷಗಳಿಂದ ನಿರಂತರವಾಗಿ ದಸರಾ ಗಜಪಡೆಯ ಸದಸ್ಯನಾಗಿರುವ ಅಭಿಮನ್ಯುಗೆ ಕ್ಯಾಪ್ಟನ್ ಪಟ್ಟ ಕಟ್ಟಿ ಅಂಬಾರಿ ಹೊರಿಸೋಕೆ ಅರಣ್ಯ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಕೂಡ ಬರೆದಿದೆ. ಈ ಬಾರಿ ನಡೆಯುವ ಸರಳದ ಮೂಲಕವೇ ಅಭಿಮನ್ಯು ಆನೆಗೆ ಕ್ಯಾಪ್ಟನ್ ಶಿಪ್ ಸಿಕ್ಕಂತಾಗಲಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜಿ. ಅಲೆಕ್ಸಾಂಡರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಕ್ಕಿಂತ ಕಾನೂನು ಮುಖ್ಯ. ನಾವು ಕಾನೂನು ಪಾಲಿಸಬೇಕು ಈ ಹಿನ್ನೆಲೆಯಲ್ಲಿ ಅಭಿಮನ್ಯು ಹೆಸರು ಸೂಚಿಸಲಾಗಿದೆ. ಅಂಬಾರಿ ಹೊರಲು ಆನೆಯ ಅವಶ್ಯಕತೆ ಇದೆ. ಅರ್ಜುನ ಆನೆಯೇ ಆಗಬೇಕು ಅಂತ ಏನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ ಆನೆಗಳಿಗೆ ಕೊರೊನಾಗೆ ಟೆಸ್ಟ್ ಮಾಡಿಸಬೇಕಾ ಎಂಬ ಚರ್ಚೆಯೂ ಸಾಗಿದೆ. ಕೊರೊನಾ ಟೆಸ್ಟ್ ಬಗ್ಗೆ ಇಲಾಖೆಯಲ್ಲೆ ವಿಭಿನ್ನ ಅಭಿಪ್ರಾಯಗಳು ಇರುವ ಕಾರಣ ಟೆಸ್ಟ್ ಮಾಡಿಸಬೇಕೋ ಬೇಡವೋ ಎಂಬ ಗೊಂದಲ ಹೆಚ್ಚಾಗಿದೆ. ಅವಶ್ಯಕತೆ ಬಿದ್ದರೆ ಆನೆಗಳಿಗೂ ಕೊರೊನಾ ಟೆಸ್ಟ್ ಮಾಡಿಸೋಣ ಎಂಬ ನಿಲುವಿಗೂ ಇಲಾಖೆ ಬಂದಿದೆ. ಅಲ್ಲದೆ ಈ ಬಗ್ಗೆ ತಜ್ಜರ ಸಲಹೆಗಾಗಿ ಮುಖ್ಯ ಅರಣ್ಯ ಅಧಿಕಾರಿಗಳಿಗೆ ಪತ್ರ ಕೂಡ ಬರೆಯಲಾಗಿದೆ. ವಿದೇಶದ ಮೃಗಾಲಯದಲ್ಲಿ ಹುಲಿಗೆ ಕೊರೊನಾ ಸೋಂಕು ಕಂಡ ಬಂದ ಕಾರಣ ದಸರಾ ಆನೆಗಳ ಬಗ್ಗೆಯೂ ಮುಂಜಾಗೃತ ಕ್ರಮವಹಿಸಲು ನಿರ್ಧಾರಿಸಲಾಗಿದೆ. ಈ ಬಗ್ಗೆ ತಜ್ಞರ ಸಲಹೆಗಾಗಿ ಇಲಾಖೆ ಕಾದಿದೆ.

Share This Article
Leave a Comment

Leave a Reply

Your email address will not be published. Required fields are marked *