ದಯವಿಟ್ಟು ಸಾಲದ ಹಣವನ್ನ ಬೇಷರತ್ತಾಗಿ ಪಡೆದು ಪ್ರಕರಣ ಮುಚ್ಚಿ- ಕೇಂದ್ರಕ್ಕೆ ಮಲ್ಯ ಮನವಿ

Public TV
2 Min Read

ನವದೆಹಲಿ: ನಾನು ಬ್ಯಾಂಕುಗಳಿಗೆ ಪಾವತಿಸಬೇಕಾದ ಎಲ್ಲಾ ಸಾಲದ ಮೊತ್ತವನ್ನು ತೆಗೆದುಕೊಳ್ಳಿ ಹಾಗೂ ನನ್ನ ಮೇಲಿರುವ ಪ್ರಕರಣಗಳನ್ನು ಕೈಬಿಡಿ ಎಂದು ಮದ್ಯದ ದೊರೆ, ವಿದೇಶಗಳಲ್ಲಿ ತಲೆಮರಿಸಿಕೊಂಡಿರುವ ವಿಜಯ್ ಮಲ್ಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿರುವುದಕ್ಕೆ ಮಲ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದಕ್ಕಾಗಿ ನಾನು ಪವತಿಸಬೇಕಾದ ಹಣವನ್ನು ಪಡೆಯಬಹುದು ಎಂದು ಹೇಳಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ವಿಜಯ್ ಮಲ್ಯ, “ಕೋವಿಡ್-19 ವಿಪತ್ತು ಪರಿಹಾರಕ್ಕಾಗಿ ಭಾರೀ ಮೊತ್ತದ ಪ್ಯಾಕೇಜ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ತನಗೆ ಬೇಕಾದಷ್ಟು ಹಣವನ್ನು ಮುದ್ರಣ ಮಾಡಬಹುದಾಗಿದೆ. ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲಗಳ ಶೇ.100 ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ? ದಯವಿಟ್ಟು ನನ್ನ ಸಾಲದ ಹಣವನ್ನು ಬೇಷರತ್ತಾಗಿ ತೆಗೆದುಕೊಂಡು ನನ್ನ ಮೇಲಿರುವ ಪ್ರಕರಣಗಳನ್ನು ಮುಚ್ಚಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿರುವ ಮದ್ಯದ ದೊರೆ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಈಗಾಗಲೇ ಬ್ಯಾಂಕುಗಳು ಪ್ರಕಟಿಸಿವೆ.

ವಿಜಯ್ ಮಲ್ಯ ಬ್ರಿಟನ್ ಪ್ರಜೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಗಡಿಪಾರು ಮಾಡುವಂತೆ ಇಂಗ್ಲೆಂಡ್ ಸರ್ಕಾರವನ್ನು ಕೇಳಿಕೊಂಡಿತ್ತು. ಸುಮಾರು 9,000 ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು 2018ರ ಡಿಸೆಂಬರ್‍ನಲ್ಲಿ ಬ್ರಿಟನ್‍ನ ವೆಸ್ಟ್ ಮಿನ್‍ಸ್ಟರ್ ನ್ಯಾಯಾಲಯ ಆದೇಶ ನೀಡಿತ್ತು. ಮಲ್ಯ ಗಡಿಪಾರಿಗೆ 2019ರ ಫೆಬ್ರವರಿಯಲ್ಲಿ ಬ್ರಿಟನ್ ಸರ್ಕಾರ ಸಮ್ಮತಿ ನೀಡಿತ್ತು. ಬಳಿಕ ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.

ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ಏ.4 ರಂದು ತಿರಸ್ಕರಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ಟೀಫನ್ ಒರ್ವಿನ್ ಮತ್ತು ಎಲಿಜಬೆತ್ ಲೇಯಿಂಗ್ ಅವರಿದ್ದ ದ್ವಿಸದಸ್ಯ ಪೀಠ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿತ್ತು.

ಪ್ರಕರಣಕ್ಕೆ ಸಂಬಂಧ ಜಿಲ್ಲಾ ಹಿರಿಯ ನ್ಯಾಯಾಧೀಶರು ಕಂಡುಕೊಂಡಿರುವ ಪ್ರಾಥಮಿಕ ಅಂಶವು ಕೆಲವು ವಿಷಯಗಳಲ್ಲಿ ಭಾರತದ ಪ್ರತಿವಾದಿಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಮಾಡಿರುವ ಆರೋಪಗಳಿಗಿಂತಲೂ ವಿಸ್ತಾರವಾಗಿವೆ. ಈ ಅಂಶವು ಭಾರತ ಮಾಡಿರುವ ಏಳು ಆರೋಪಗಳಿಗೆ ಹೊಂದಿಕೆಯಾಗುತ್ತಿದ್ದು, ಮಲ್ಯ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಲು ಯಾವುದೇ ಪ್ರಮುಖ ಅಂಶಗಳಿಲ್ಲ ಎಂದು ಪೀಠ ಹೇಳಿತ್ತು.

Share This Article
Leave a Comment

Leave a Reply

Your email address will not be published. Required fields are marked *