ದಂಡಿಯಲ್ಲಿ ಪ್ರಧಾನಿ ಮೋದಿ, ವಿದುರಾಶ್ವತ್ಥದಲ್ಲಿ ಸಿಎಂ ಯಡಿಯೂರಪ್ಪ

Public TV
1 Min Read

– ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆರಂಭಕ್ಕೆ ಕ್ಷಣಗಣನೆ

ಚಿಕ್ಕಬಳ್ಳಾಪುರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದಂಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅದೇ ರೀತಿ ರಾಜ್ಯದಲ್ಲಿ ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ವಿದುರಾಶ್ವತ್ಥದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಹಾಗೂ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ನಾಳೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಎಸ್‍ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 11 ಗಂಟೆಗೆ ವಿದುರಾಶ್ವತ್ಥಕ್ಕೆ ಸಿಎಂ, ರಾಜ್ಯಪಾಲರು ಸೇರಿದಂತೆ ಸಚಿವರು ಆಗಮಿಸಲಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಸೇನಾನಿಗಳ ಸವಿನೆನಪಿನ ಸ್ಮಾರಕ ಸ್ಥೂಪಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ನಂತರ ಸ್ವಾತಂತ್ರ್ಯ ಸಂಗ್ರಾಮದ ಪೋಟೋ ಗ್ಯಾಲರಿ ವೀಕ್ಷಣೆ ಮಾಡಿಲಿದ್ದು, ಕೊನೆಗೆ ಮೆಮೋರಿಯಲ್ ಹಾಲ್ ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದಂಡಿಯಲ್ಲಿ ಚಾಲನೆ ನೀಡಲಿರುವ ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಆಗಸ್ಟ್ 15, 2022ಕ್ಕೆ 75 ವರ್ಷಗಳಾಗಲಿವೆ. ಹೀಗಾಗಿ ನಾಳೆಯಿಂದ ಆಗಸ್ಟ್ 15, 2022 ರವರೆಗೆ 75 ವಾರಗಳ ಕಾಲ ದೇಶದ ವಿವಿಧ ಸ್ವಾತಂತ್ರ್ಯ ಸಂಗ್ರಾಮದ ಸವಿನೆನೆಪಿನ ತಾಣಗಳಲ್ಲಿ ಈ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಪ್ರತಿ ವಾರ ನಡೆಸಲಾಗುತ್ತದೆ. ನಾಳೆ ಮೊದಲ ವಾರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *