ತ್ರಿಕೋನ ಫೈಟಲ್ಲಿ ಯಾರ ಮುಡಿಗೆ ‘ಶಿರಾ’ ಕಿರೀಟ?- ನಾಳೆ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ

Public TV
2 Min Read

ತುಮಕೂರು: ಶಿರಾ ಉಪಚುನಾವಣೆಯ ಜಿದ್ದಾಜಿದ್ದಿನ ಅಖಾಡದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಇರೋಂದ್ರಿಂದ ಇಂದಿನ ಮತ ಎಣಿಕೆ ಇನ್ನಷ್ಟು ಮತ್ತಷ್ಟು ಕುತೂಹಲ ಕೆರಳಿಸಿದೆ.

ಕಾಂಗ್ರೆಸ್, ಜೆಡಿಎಸ್‍ಗೆ ಮತ್ತೆ ಅಸ್ತಿತ್ವ ಉಳಿಸಿಕೊಳ್ಳುವ ತವಕವಿದ್ದರೆ, ಬಿಜೆಪಿಗೆ ಖಾತೆ ತೆರೆಯುವ ತವಕ. ಶಿರಾ ಅಖಾಡದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ. ಭಾರೀ ಕುತೂಹಲ ಮೂಡಿಸಿರೋ ಶಿರಾ ಉಪಚುನಾವಣೆ ಫಲಿತಾಂಶ ಇವತ್ತು ಪ್ರಕಟಗೊಳ್ಳಲಿದೆ. ನವೆಂಬರ್ 3ರಂದು ಮತದಾರರು ಬರೆದ ಭವಿಷ್ಯ ಇಂದು ಬಹಿರಂಗವಾಗಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರೂ ಪಕ್ಷದ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು ವಿಜಯದ ಕಿರೀಟ ಯಾರ ತಲೆಯೇರಲಿದೆ ಅನ್ನೋದು ಮಧ್ಯಾಹ್ನದೊಳಗೆ ತಿಳಿಯಲಿದೆ.

ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಲಿದೆ. ಶಿರಾ ಉಪಚುನಾವನೆಯ ಕಣದಲ್ಲಿ ಒಟ್ಟು ಅಭ್ಯರ್ಥಿಗಳು 15 ಅದೃಷ್ಟ ಪರೀಕ್ಷೆ ನಡೆಸಿದ್ದು, ಕ್ಷೇತ್ರದಲ್ಲಿ 2,15,694 ಮತದಾರರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಶೇ.84 ಅಂದರೇ 1,77,645 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 4,821 ಅಂಚೆ ಮತಗಳು ಚಲಾವಣೆಯಾಗಿದೆ.

ಇಂದು 24 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 14 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ. 330 ಮತಗಟ್ಟೆಗಳ ರಿಸಲ್ಟ್ ಹೊರಬೀಳಲಿದೆ. ಕೋವಿಡ್ ಹಿನ್ನಲೆಯಲ್ಲಿ ಭಾರೀ ಮುಂಜಾಗೃತೆ ವಹಿಸಿದ್ದು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಥರ್ಮಲ್ ಸ್ಕಾನಿಂಗ್ ನಡೆಯಲಿದೆ.

ಚುನಾವಣಾ ಮತ ಎಣಿಕೆಗೆ ಹಿನ್ನೆಲೆ ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6ರವರೆಗೂ ಮತ ಎಣಿಕಾ ಕೇಂದ್ರದ ಸುತ್ತ 5 ಕಿ.ಮೀ ವ್ಯಾಪ್ತಿ ಹಾಗೂ ಶಿರಾ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನು ಕ್ಷೇತ್ರದಲ್ಲಿ ಮತ ಎಣಿಕೆ ಕೇಂದ್ರದ ಸುತ್ತ 3 ಸುತ್ತಿನ ಭದ್ರತೆ. ಮತ ಎಣಿಕೆ ಕೇಂದ್ರದ ಸುತ್ತ ಸೆಂಟ್ರಲ್ ಆರ್ಮಡ್ ಫೋರ್ಸ್ ಕಾರ್ಯನಿರ್ವಹಣೆ. 2 ಕೆಎಸ್‍ಆರ್‍ಪಿ, 3 ಡಿವೈಎಸ್ಪಿ, ಸಿಪಿಐ, ಪಿಎಸ್‍ಐ ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಈ ಹಿನ್ನಲೆಯಲ್ಲಿ ಒಂದೊಂದು ಸುತ್ತಿನಲ್ಲೂ ಒಬ್ಬೊಬ್ಬರು ಮುನ್ನಡೆ ಕಾಯ್ದುಕೊಂಡು ಫಲಿತಾಂಶದಲ್ಲಿ ಕುತೂಹಲ ಹುಟ್ಟುವ ಸಾಧ್ಯತೆ ಇದೆ. 6 ಜಿ.ಪಂ ಕ್ಷೇತ್ರ ಹಾಗೂ ನಗರ ಪ್ರದೇಶ ಸೇರಿ 7 ಕಡೆಗಳಲ್ಲಿ ಯಾರಿಗೆ ಎಷ್ಟು ಮತ ಬೀಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *