ತೆಂಗು ಸಂಸ್ಕರಣೆ ವ್ಯವಸ್ಥೆ ಖುದ್ದು ವೀಕ್ಷಿಸಿದ ಸಚಿವ ಅಶ್ವತ್ಥನಾರಾಯಣ

Public TV
2 Min Read

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮೈಲನಾಯಕನ ಹೊಸಹಳ್ಳಿ ಗ್ರಾಮದಲ್ಲಿರುವ ರೈತರ ಉತ್ಪಾದಕರ ಸಂಸ್ಥೆಯ ಸಂಸ್ಕರಣಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರೈತರ ಜತೆ ಸಂವಾದ ನಡೆಸಿದರು.

ರೈತರ ಉತ್ಪಾದಕರ ಸಂಸ್ಥೆಯು ನೇರವಾಗಿ ರೈತರಿಂದಲೇ ಖರೀದಿಸಿದ ತೆಂಗಿನ ಕಾಯಿಗಳನ್ನು ಸಂಸ್ಕರಿಸಿ, ಅವುಗಳನ್ನು ಮಧ್ಯವರ್ತಿಗಳ ಪ್ರಮೇಯವಿಲ್ಲದೆ ಗ್ರಾಹಕರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದು, ಈ ಪ್ರಯೋಗ ಯಶಸ್ವಿ ಮತ್ತು ಲಾಭದಾಯಕವೂ ಆಗಿದೆ. ಇಲ್ಲಿ ತೆಂಗಿನ ಕಾಯಿ ಸುಲಿದು ಕ್ರಮಬದ್ಧವಾಗಿ ಸಂಸ್ಕರಣೆ ಮಾಡಿ ಬೇರೆಡೆಗೆ ಪೂರೈಸುವ ವಿಧಾನವನ್ನು ಸಚಿವರು ಖುದ್ದು ವೀಕ್ಷಣೆ ಮಾಡಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಈ ಪ್ರದೇಶದಲ್ಲಿ ಮೊದಲಿನಿಂದಲೂ ತೆಂಗು ಬೆಳೆಯನ್ನು ರೈತರು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಅನೇಕ ದಶಕಗಳಿಂದ ನ್ಯಾಯಸಮ್ಮತ ಬೆಲೆ ಸಿಗದೇ ಕಷ್ಟಕ್ಕೆ ಸಿಲುಕಿದ್ದ ರೈತರು ಸುಲಿದಿರುವ ಒಂದು ಕೆಜಿ ತೆಂಗಿನ ಕಾಯಿಯನ್ನು ಕೇವಲ 25 ರೂ.ಗಳಿಗೆ ಮಾತ್ರ ಮಾರುವಂಥ ಸ್ಥಿತಿ ಇತ್ತು. ಆದರೆ ದಲ್ಲಾಳಿಗಳು ಇದನ್ನೇ ಲಾಭ ಮಾಡಿಕೊಂಡಿದ್ದರು ಎಂದರು.

ಈಗ ಕೃಷಿ ಕಲ್ಪದಂಥ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿ ತಲೆ ಎತ್ತಿರುವ ರೈತರ ಉತ್ಪಾದಕರ ಸಂಸ್ಥೆಯು ನೇರವಾಗಿ ರೈತರಿಂದಲೇ ಒಂದು ಕೆಜಿ ತೂಕದ ಸುಲಿದಿರುವ ತೆಂಗಿಗೆ 35 ರೂ.ವರೆಗೂ ಬೆಲೆ ಕೊಟ್ಟು ಖರೀದಿ ಮಾಡುತ್ತಿದೆ. ಅಲ್ಲದೆ, ಇಲ್ಲಿನ ತೆಂಗನ್ನು ಅತ್ಯುತ್ತಮವಾಗಿ ಸಂಸ್ಕರಣೆ ಮಾಡಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರಕ್ಕೆ ಪೂರೈಕೆ ಮಾಡುತ್ತಿದೆ. ಇಲ್ಲಿಂದ ವಾರಕ್ಕೊಮ್ಮೆ ಒಂದು ಟ್ರಕ್ ತೆಂಗಿನ ಕಾಯಿ ಅಲ್ಲಿಗೆ ಸರಬರಾಜು ಆಗುತ್ತಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ನಾನು ಕುಡುಕ ಅಲ್ಲ, ಕುಡಿಯುವ ಅಭ್ಯಾಸವೂ ನನಗಿಲ್ಲ: ಸಿ.ಟಿ.ರವಿ

ಜಿಲ್ಲೆಯಲ್ಲಿ ರೈತರು ಮತ್ತು ಬಳಕೆದಾರರ ನಡುವೆ ರೈತರ ಉತ್ಪಾದಕರ ಸಂಸ್ಥೆ ಮೂಲಕ ಉತ್ತಮ ಲಿಂಕ್ ಏರ್ಪಟ್ಟದ್ದು, ಇದಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು. ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ಕೊಡಲಾಗುವುದು ಎಂದ ಅವರು, ಈ ವ್ಯವಹಾರದಲ್ಲಿ ರೈತರ ಉತ್ಪಾದಕರ ಸಂಸ್ಥೆಗೆ ತನ್ನ ಖರ್ಚೆಲ್ಲ ಕಳೆದು ಅತ್ಯಲ್ಪ ಪ್ರಮಾಣದ ಲಾಭ ಇರುತ್ತದೆ ಎಂದರು.

ಕೃಷಿ ಕಲ್ಪ ಫೌಂಡೇಶನ್ ಅಧ್ಯಕ್ಷ ಪ್ರಶಾಂತ ಪ್ರಕಾಶ್ ಅವರು ಮಾಡಿರುವ ಸಾಧನೆಯನ್ನು ಕೊಂಡಾಡಿದ ಅವರು, ಸುಧಾರಿತ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕೃಷಿ ಮಾಡದಿದ್ದರೆ ಭವಿಷ್ಯದಲ್ಲಿ ಆಹಾರದ ಅಗತ್ಯವನ್ನು ನೀಗಿಸುವುದು ಕಷ್ಟವಾಗುತ್ತದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಶಾಲಾ-ಕಾಲೇಜು ಆರಂಭಕ್ಕೆ ಸೋಮವಾರ ಮಾರ್ಗಸೂಚಿ

ಈ ಸಂದರ್ಭದಲ್ಲಿ ಕೃಷಿ ಕಲ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರಶಾಂತ ಪ್ರಕಾಶ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಕೃಷಿ ಕಲ್ಪ ಫೌಂಡೇಷನ್ ಸಿಇಒ ಸಿ.ಎಂ.ಪಾಟೀಲ್, ಅರ್ಕಾವತಿ ಎಫ್ ಪಿ ಒ ಸಿಇಒ ವಿನುತಾ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *