‘ತುರ್ತು ಸ್ಪಂದನಾ ವಾಹನ’ ಸಂಚಾರಕ್ಕೆ ಚಾಲನೆ ನೀಡಿದ ಕೊಡಗು ಎಸ್ ಪಿ ಕ್ಷಮ ಮಿಶ್ರ

Public TV
2 Min Read

ಮಡಿಕೇರಿ: ಪೊಲೀಸ್ ಇಲಾಖೆಯಿಂದ ಕೊಡಗು ಜಿಲ್ಲಾ ಪೊಲೀಸ್ ಘಟಕಕ್ಕೆ ನೀಡಲಾಗಿರುವ 7 `ತುರ್ತು ಸ್ಪಂದನಾ ವಾಹನ’ ಸಂಚಾರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರ ಅವರು ಇಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು, ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು ಸಾರ್ವಜನಿಕರ ಅನುಕೂಲಕ್ಕೆ ತರಲಾಗಿದೆ. ಆ ದಿಸೆಯಲ್ಲಿ `ದೇಶಾದ್ಯಂತ ಒಂದೇ ತುರ್ತು ಕರೆ 112′ ಸಂಖ್ಯೆಗೆ ಕರೆ ಮಾಡಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಪರಿಹರಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.

ತುರ್ತು ಸ್ಪಂದನ ಸಹಾಯ ವ್ಯವಸ್ಥೆಯು ಇಆರೆಸ್‍ಎಸ್ 112 ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ತುರ್ತು ಕರೆಗಳಾದ 100(ಪೊಲೀಸ್), 101 (ಅಗ್ನಿಶಾಮಕ ಮತ್ತು ತುರ್ತು ಸೇವೆ) ಹಾಗೂ ಇತರೆ ತುರ್ತು ಕರೆಗಳನ್ನು 112ರಲ್ಲಿ ಏಕೀಕೃತ ಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಅಕ್ರಮ ಜೂಜಾಟ, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ರಕ್ಷಣೆ, ಪ್ರಾಕೃತಿಕ ವಿಪತ್ತು ಮತ್ತಿತರ ಸಂದರ್ಭಗಳಲ್ಲಿ ತುರ್ತು ಸೇವೆಗಳು ಕಂಡುಬಂದಲ್ಲಿ 112ಕ್ಕೆ ದೂರವಾಣಿ ಕರೆ ಮಾಡಿ ಸೇವೆ ಪಡೆಯಬಹುದಾಗಿದೆ ಎಂದು ಕ್ಷಮ ಮಿಶ್ರ ಅವರು ವಿವರಿಸಿದರು.

ತುರ್ತು ಸ್ಪಂದನ ಸಹಾಯಕ ವ್ಯವಸ್ಥೆಯು ದೇಶಾದ್ಯಂತ ಒಂದೇ ತುರ್ತು ಕರೆ 112, ರಾಜ್ಯದ್ಯಂತ ತುರ್ತು ಕರೆ ಸ್ವೀಕರಿಸಲು ಬೆಂಗಳೂರಿನಲ್ಲಿ ವೈರ್ಲೆಸ್ ಕೇಂದ್ರ, ಕರೆ 112, ಎಸ್‍ಎಂಎಸ್ 112,  ಇಮೇಲ್ erss112ktk@ksp.gov.in ವೆಬ್ ಪೋರ್ಟಲ್ https://ka.ners.in, 112 ಇಂಡಿಯಾ ಆ್ಯಪ್ ವೆಬ್ ಪೋರ್ಟಲ್ ಸಾಮಾನ್ಯ ಮೊಬೈಲ್‍ನಲ್ಲಿ 5 ಅಥವಾ 9 ಸಂಖ್ಯೆಯನ್ನು ದೀರ್ಘವಾಗಿ ಒತ್ತುವ ಮೂಲಕ ಸೇವೆ ಪಡೆಯುವುದು ಇದರ ವೈಶಿಷ್ಟ್ಯವಾಗಿದೆ ಎಂದರು.

ಇನ್ನಷ್ಟು ಮಾಹಿತಿ: ಸ್ಮಾರ್ಟ್ ಮೊಬೈಲ್‍ನಲ್ಲಿ ಪವರ್ ಬಟನ್‍ನ್ನು ಐದು ಬಾರಿ ನಿರಂತರವಾಗಿ ಒತ್ತುವ ಮೂಲ ತುರ್ತು ವಿನಂತಿ ಕಳುಹಿಸಬಹುದಾಗಿದೆ. ಹಾಗೆಯೇ ಕರೆ ಮಾಡಿದವರ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆಯೊಂದಿಗೆ ಹತ್ತಿರದ ತುರ್ತು ಸ್ಪಂದನ ವಾಹನದ ಸಿಬ್ಬಂದಿಗಳಿಗೆ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ.

ರಾಜ್ಯಾದ್ಯಂತ ತುರ್ತು ಕರೆ ಸ್ವೀಕರಿಸಲು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವೈರ್ಲೆಸ್ ಸ್ಥಾಪಿಸಲಾಗಿದೆ. ಸ್ವೀಕೃತಗೊಂಡ ಕರೆಗಳ್ನು ಸಂಬಂಧಿಸಿದ ಜಿಲ್ಲೆಗಳ ಸಂಯೋಜನಾ ಕೇಂದ್ರಕ್ಕೆ ರವಾನಿಸಿ ಹತ್ತಿರದ ತುರ್ತು ಸ್ಪಂದನ ವಾಹನಕ್ಕೆ ಮಾಹಿತಿ ನೀಡಿ ದೂರುದಾರರ ದೂರಿಗೆ ಸ್ಪಂದಿಸಲಿದ್ದಾರೆ.

ಡಿವೈಎಸ್‍ಪಿ ದಿನೇಶ್ ಕುಮಾರ್, ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಇನ್ಸ್‍ಪೆಕ್ಟರ್ ಮೇದಪ್ಪ, ರಿಸರ್ವ್ ಪೊಲೀಸ್ ಇನ್ಸ್‍ಪೆಕ್ಟರ್ ರಾಚಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *