ತುಂಬಿ ಹರಿದ ಸೀತಾನದಿ- ಬ್ರಹ್ಮಾವರದಲ್ಲಿ ಅಣೆಕಟ್ಟು ಜಲಾವೃತ

Public TV
2 Min Read

-ಕೊಡಗಿನಲ್ಲಿ ಮತ್ತೆ ಪ್ರವಾಹದ ಆತಂಕ

ಉಡುಪಿ/ಕೊಡಗು: ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೊಡಗಿನ ಜನತೆಗೆ ಆಗಸ್ಟ್ ನಲ್ಲಿ ಸಂಭವಿಸಿದ ಪ್ರವಾಹ ಮತ್ತೆ ಮರುಕಳಿಸಿದರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕೊಡಗು ಭಾಗದಲ್ಲಿ ಮಳೆಯಾಗುತ್ತಿದ್ದು, ಜನ ಪ್ರವಾಹದ ಆತಂಕದಲ್ಲಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದೆ. ಬ್ರಹ್ಮಾವರ ತಾಲೂಕಿನ ಸೀತಾನದಿ ವಿಪರೀತ ಮಟ್ಟ ತಲುಪಿದ್ದು ಕಿಂಡಿ ಅಣೆಕಟ್ಟಿನ ಮೇಲೆ ನೀರು ಹರಿಯುತ್ತಿದೆ. ಸುತ್ತಮುತ್ತಲಿನ ಮನೆ ಕೃಷಿ ಭೂಮಿ ಭತ್ತದ ಬೇಸಾಯದ ಗದ್ದೆಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು ಮುಳುಗಡೆಯಾದ ಪ್ರದೇಶಗಳ ಜನರ ರಕ್ಷಣೆ ಮಾಡಲಾಗಿದೆ. ಸ್ಥಳೀಯ ನಾಡದೋಣಿ ಮೀನುಗಾರಿಕೆ ,ಮರಳುಗಾರಿಕೆ ನಡೆಸುವವರ ದೋಣಿ ಬಳಸಿ ಜನರನ್ನು ಎತ್ತರ ಪ್ರದೇಶಗಳಿಗೆ ಕರೆದುಕೊಂಡು ಬರಲಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿಕೊಟ್ಟು ಜನರಿಗೆ ಶಾಲೆ ದೇವಸ್ಥಾನಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.

ತುಂಬಿದ ನದಿಗಳು: ಉಡುಪಿ ತಾಲೂಕಲ್ಲಿ ಕಳೆದ 24 ತಾಸುಗಳಲ್ಲಿ 316 ಮಿಲಿ ಮೀಟರ್ ಮಳೆ ಬಿದ್ದಿದೆ. ಉಡುಪಿ ತಾಲೂಕು ಒಂದರಲ್ಲಿಯೇ ಇಷ್ಟು ಪ್ರಮಾಣದ ಮಳೆ ಸುರಿದಿದೆ. ಶನಿವಾರ ಮಧ್ಯಾಹ್ನದಿಂದ ಉಡುಪಿಯಲ್ಲಿ ಹನಿ ನಿಲ್ಲದೆ ಮಳೆಯಾಗಿದೆ. ನಿರಂಂತರವಾಗಿ ಸುರಿದ ಮಳೆಗೆ ಉಡುಪಿ ನಗರವೂ ಸೇರಿದಂತೆ, ಸುತ್ತಮುತ್ತಲ ಗ್ರಾಮಗಳಲ್ಲಿ ತೀವ್ರ ನೆರೆ ಏರಿದೆ.ಸ್ವರ್ಣಾ, ಸೀತಾ, ಮಡಿಸಾಲು, ಉದ್ಯಾವರ, ಶಾಂಭವಿ, ಪಾಪನಾಶಿನಿ, ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನಗರದ ಮಧ್ಯಭಾಗದಲ್ಲಿ ಹರಿಯುವ ಇಂದ್ರಾಣಿ ನದಿಯೂ ಅಪಾಯದ ಮಟ್ಟವನ್ನು ಮೀರಿದೆ. ಉಡುಪಿ, ಕಾರ್ಕಳ ಭಾಗದಲ್ಲಿ ಮುಸಲಧಾರೆ ಮುಂದುವರಿದಿದೆ.

ದಾಖಲೆ ಮಳೆ: ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 197 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ ಅತ್ಯಧಿಕ 315.3 ಮಿ.ಮೀ. ಮಳೆ ದಾಖಲಾಗಿದೆ. ಮಲೆನಾಡಿನ ತಪ್ಪಲಿನಲ್ಲಿರುವ ಕಾರ್ಕಳ ತಾಲೂಕಿನಲ್ಲಿ 256.5 ಮಿ.ಮೀ. ಮಳೆ ಬಿದ್ದಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಹೆಚ್ಚು ಮಳೆಯಾಗುತ್ತಿದ್ದ ಕುಂದಾಪುರ ತಾಲೂಕಿನಲ್ಲಿ ಕನಿಷ್ಠ 54.5 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಬಿದ್ದ ಮಳೆ ಪ್ರಮಾಣದ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

ಕೊಡಗಿನಲ್ಲಿ ಪ್ರವಾಹ ಆತಂಕ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತಲಕಾವೇರಿ ಮತ್ತು ಭಾಗಮಂಡಲ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದ್ದು, ತ್ರಿವೇಣಿ ಸಂಗಮ ಬಹುತೇಕ ಮುಳುಗಡೆ ಆಗಿದೆ. ಪರಿಣಾಮವಾಗಿ ಭಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.

ನಾಪೋಕ್ಲು ರಸ್ತೆ ಮೇಲೆ 4 ಅಡಿಯಷ್ಟು ನೀರು ಹರಿಯುತ್ತಿದ್ದು, ನೆಲಜಿ, ಅಯ್ಯಂಗೇರಿ, ಸಣ್ಣಪುಲಿಕೋಟು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ವಾಹನಗಳ ಸಂಚಾರವಿಲ್ಲದ ಪರಿಣಾಮ ಜನರು ಪ್ರವಾಹದ ನೀರಿನಲ್ಲೇ ನದಿ ದಾಟುತ್ತಿದ್ದಾರೆ. ಮಳೆ ಹೀಗೆ ಮುಂದುವರೆದಲ್ಲಿ ಮತ್ತೆ ಪ್ರವಾಹ ಉಕ್ಕಿ ಹರಿಯುವ ಸಾಧ್ಯತೆ ಇದೆ. ನಾಳೆ ಬೆಳಗ್ಗೆಯವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಏನಾಗುವುದೋ ಎಂಬ ಆತಂಕದಲ್ಲಿ ಜನರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *