ತೀರಾ ಅಪರೂಪದ ಕೆಂಪು ಹವಳದ ಹಾವು ಪತ್ತೆ

Public TV
1 Min Read

ಡೆಹ್ರಾಡೂನ್: ತೀರಾ ಅಪರೂಪದ ಕೆಂಪು ಹವಳದ ಕುಕ್ರಿ ಹಾವು ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಮನೆಯೊಂದರಲ್ಲಿ ಪತ್ತೆಯಾಗಿದೆ.

ನೈನಿತಾಲ್‍ನ ಬಿಂದುಖಟ್ಟಾ ಪ್ರದೇಶದ ಬಳಿ ಈ ಅಪರೂಪದ ಹಾವು ಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ರಕ್ಷಣೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಬರುವ ಮುನ್ನ ಗ್ರಾಮಸ್ಥರು ಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದೊಳಗೆ ರಕ್ಷಿಸಿದ್ದರು ಎಂದು ತಿಳಿದು ಬಂದಿದೆ.

ಬಿಂದುಖಟ್ಟಾ ಪ್ರದೇಶದ ಕುರಿಯಾ ಖಟ್ಟಾ ಗ್ರಾಮದ ನಿವಾಸಿ ಕವೀಂದ್ರ ಕೊರಂಗಾ ಅವರಿಂದ ಗೌಲಾ ಅರಣ್ಯ ವಲಯಕ್ಕೆ ದೂರವಾಣಿ ಮೂಲಕ ಕರೆ ಬಂದಿತ್ತು. ಅವರು ಮನೆಯೊಳಗೆ ಹಾವು ಬಂದಿದ್ದು, ರಕ್ಷಣೆ ಮಾಡುವಂತೆ ಮನವಿ ಮಾಡಿದ್ದರು. ನಾವು ಹೋಗುವಷ್ಟರಲ್ಲಿ ಗ್ರಾಮಸ್ಥರು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ರಕ್ಷಿಸಿದ್ದರು ಎಂದು ಅರಣ್ಯ ಅಧಿಕಾರಿ ನಿತೀಶ್ ಮಣಿ ತ್ರಿಪಾಠಿ ತಿಳಿಸಿದ್ದಾರೆ.

ನಾವು ಅದನ್ನು ನೋಡಿದ ತಕ್ಷಣ ನಮಗೆ ಆಶ್ಚರ್ಯವಾಯಿತು. ಇದನ್ನು ಕೆಂಪು ಹವಳದ ಕುಕ್ರಿ ಹಾವು ಎಂದು ಕರೆಯಲಾಗುತ್ತದೆ. ಇದು ತೀರ ಅಪರೂಪದ ಹಾವಾಗಿದೆ. ನಂತರ ನಾವು ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದೇವೆ ಎಂದರು.

ಈ ಹಿಂದೆ ಅಂದರೆ 1936 ರಲ್ಲಿ ಉತ್ತರ ಪ್ರದೇಶದ ಲಖಿಂಪುರ ಪ್ರದೇಶದಲ್ಲಿ ಮೊದಲ ಬಾರಿಗೆ ಕೆಂಪು ಹವಳದ ಕುಕ್ರಿ ಹಾವು ಪತ್ತೆಯಾಗಿತ್ತು. ಆಗ ಈ ಹಾವಿಗೆ ವೈಜ್ಞಾನಿಕ ಹೆಸರು ‘ಒಲಿಗೊಡಾನ್ ಖೇರಿಯೆನ್ಸಿಸ್’ ಎಂದು ತಜ್ಞರು ಹೇಳಿದ್ದರು. ನಂತರ 2015ರಲ್ಲಿ ಉತ್ತರಾಖಂಡದ ಸುರೈ ಅರಣ್ಯ ವಲಯದಲ್ಲಿ ಇದೇ ರೀತಿ ಹಾವು ಪತ್ತೆಯಾಗಿತ್ತು.

ಈ ಹಾವಿನ ಬಣ್ಣ ಕೆಂಪು ಮತ್ತು ಕಿತ್ತಳೆ ಬಣ್ಣಗಳಿಂದ ಕೂಡಿದೆ. ಕೆಲವು ವಾರಗಳ ಹಿಂದೆ ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನದಲ್ಲಿ ಕೆಂಪು ಹವಳದ ಕುಕ್ರಿ ಹಾವು ಪತ್ತೆಯಾಗಿತ್ತು. ಇದೀಗ ನೈನಿತಾಲ್ ಜಿಲ್ಲೆಯಲ್ಲಿ ಮತ್ತೆ ಈ ಹಾವು ಪತ್ತೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *