ತಾಯಿಯಾಗಿ ಕೇಳಿಕೊಳ್ಳುತ್ತಿದ್ದೇನೆ, ಗೌಪ್ಯತೆಯನ್ನು ಕಾಪಾಡಿ: ಶಿಲ್ಪಾ ಶೆಟ್ಟಿ ಮನವಿ

Public TV
2 Min Read

– 29 ವರ್ಷಗಳಿಂದ ತುಂಬಾ ಶ್ರಮ ಪಟ್ಟಿದ್ದೇನೆ

ಮುಂಬೈ: ಬಾಲಿವುಡ್ ನಟಿ ಶಿಲ್ವಾ ಶೆಟ್ಟಿ ತಮ್ಮ ನೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಾಯಿಯಾಗಿ ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬದ ಸಲುವಾಗಿ ನಮ್ಮ ಗೌಪ್ಯತೆಯನ್ನು ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪತಿ ರಾಜ್ ಕುಂದ್ರಾ ಅವರು ಜೈಲಿಗೆ ಹೋದಾಗಿನಿಂದ ಅಷ್ಟಾಗಿ ಶಿಲ್ಪಾ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇಂದು ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಸುಳ್ಳು ಮಾಹಿತಿಗಳಿಗೆ ನೊಂದು ಪೋಸ್ಟ್ ಮಾಡಿದ್ದಾರೆ. ಹೌದು ಹಲವು ದಿನಗಳಿಂದ ನಾನು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇನೆ. ನನ್ನ ಮೇಲೆ ಬರುತ್ತಿರುವ ವದಂತಿಗಳು, ಮಾಧ್ಯಮದಲ್ಲಿ ನಮ್ಮ ಮೇಲೆ ವಿನಾಕಾರಣ ಮಾಡುತ್ತಿರುವ ಆರೋಪಗಳನ್ನು ಗಮನಿಸಿದ್ದೇನೆ. ನನ್ನನ್ನು ಸೇರಿ ನಮ್ಮ ಇಡೀ ಕುಟುಂಬವನ್ನು ಟ್ರೋಲ್ ಮಾಡಿರುವ ಪೋಸ್ಟ್ ಗಳನ್ನು ನೋಡಿದ್ದೇನೆ.

ಏನು ಗೊತ್ತಿಲ್ಲದೇ ಸುಮ್ಮನೆ ಸುಳ್ಳು ಆರೋಪಗಳನ್ನು ಮಾಡಬೇಡಿ. ಇದರಲ್ಲಿ ನನ್ನದು ತಪ್ಪಿಲ್ಲ. ನನ್ನ ಫಿಲಾಸಪಿ ‘ನೆವರ್ ಕಂಪ್ಲಿನ್, ನೆವರ್ ಎಕ್ಸೆಪ್ಲೆಯನ್’ ಅದನ್ನು ಇಲ್ಲಿ ನೆನಪಿಸಲು ಇಚ್ಚಿಸುತ್ತೇನೆ. ಬೇಡದ ಅಪವಾದಗಳಿಗೆ ನಮ್ಮನ್ನು ದೂಡಬೇಡಿ. ನನಗೆ ಮುಂಬೈ ಪೊಲೀಸ್ ಮತ್ತು ನ್ಯಾಯಾಂಗದ ಮೇಲೆ ಪೂರ್ಣ ನಂಬಿಕೆಯಿದೆ. ಅವರು ಸರಿಯಾಗಿ ತನಿಖೆ ಮಾಡಿ ನ್ಯಾಯವನ್ನು ಕೊಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ನಿಮ್ಮಲ್ಲಿ ನಾನು ತಾಯಿಯಾಗಿ ಕೇಳಿಕೊಳ್ಳುವುದೆಂದರೆ, ದಯವಿಟ್ಟು ಪೂರ್ತಿ ವಿಷಯ ತಿಳಿಯದೆ ಏನನ್ನು ಮಾತನಾಡಬೇಡಿ. ನನ್ನ ಮಕ್ಕಳ ಸಲುವಾಗಿ ನಮ್ಮ ವೈಯಕ್ತಿಕ ವಿಷಯಗಳನ್ನು ಗೌಪ್ಯವಾಗಿಡಿ. ನಾನು ಕಾನೂನು ಪಾಲಿಸುವ ಭಾರತದ ಹೆಮ್ಮಯ ಪ್ರಜೆ. ಕಳೆದ 29 ವರ್ಷಗಳಿಂದ ನನ್ನ ವೃತ್ತಿಜೀವನದಲ್ಲಿ ಗೌರವ ಸ್ಥಾನ ಪಡೆಯಲು ತುಂಬಾ ಪರಿಶ್ರಮವನ್ನು ಪಡುತ್ತಿದ್ದೇನೆ ಎಂದರು.

ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ನಾನು ಯಾರನ್ನೂ ನಿರಾಸೆಗೊಳಿಸಲಿಲ್ಲ. ಆದ್ದರಿಂದ ಮುಖ್ಯವಾಗಿ ಈ ಸಮಯದಲ್ಲಿ ನನ್ನ ಕುಟುಂಬದ ಸಲುವಾಗಿ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ‘ನನ್ನ ಹಕ್ಕನ್ನು’ ಗೌರವಿಸಿ. ದಯವಿಟ್ಟು ಕಾನೂನು ರೀತಿ ವಿಚಾರಣೆ ಮಾಡಲು ಬಿಡಿ. ಸತ್ಯಮೇವ ಜಯತೆ! ಎಂದು ವಿನಂತಿಸಿಕೊಂಡು ಪೋಸ್ಟ್ ಮಾಡಿದ್ದಾರೆ.

ಶಿಲ್ಪಾ ಅವರ ಪತಿ ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ಚಿತ್ರಿಸಿ ನಿರ್ಮಾಣ ಮಾಡುವ ಆರೋಪದಡಿಯಲ್ಲಿ ಬಂಧಿಸಲಾಗಿದೆ. ಈ ಸಲುವಾಗಿ ಶಿಲ್ಪಾ ಅವರ ಕುಟುಂಬದ ಮೇಲೆ ಎಲ್ಲಾರು ಆರೋಪಿಸುತ್ತಿದ್ದು, ನೊಂದ ಅವರು ಈ ರೀತಿ ಪೋಸ್ಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *