ತಾಕತ್ತಿದ್ರೆ ಈ ರಾಜ್ಯ ಬಂದ್ ಮಾಡು ನೋಡೋಣ – ವಾಟಾಳ್‍ಗೆ ರೇಣುಕಾಚಾರ್ಯ ಸವಾಲ್

Public TV
2 Min Read

– ಯತ್ನಾಳ್ ವಿರುದ್ಧ ಕಿಡಿ
– ಸಿ.ಪಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ

ದಾವಣಗೆರೆ: ತಾಕತ್ತಿದ್ರೆ ಈ ರಾಜ್ಯ ಬಂದ್ ಮಾಡು ನೋಡೋಣ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗೆ ಏಕವಚನದಲ್ಲಿಯೇ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸವಾಲೆಸೆದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸಿಎಂ ಬಗ್ಗೆ ಕೇವಲವಾಗಿ ಮಾತಾಡುತ್ತೀರಾ ಹುಷಾರ್. ಬಂದ್ ಯಶಸ್ವಿ ಆಗದಂತೆ ನೋಡಿಕೊಳ್ಳುತ್ತೇವೆ. ವಾಟಾಳ್ ಬುಟಾಟಿಕೆ ವ್ಯಕ್ತಿ. ಎಷ್ಟು ಅಕ್ರಮ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಮಗಳು ಹಾಗೂ ಅಳಿಯನ ಹೆಸರಿನಲ್ಲಿ ಎಷ್ಟೆಷ್ಟು ಅಕ್ರಮ ಗಳಿಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಮೈಸೂರಿನ ವರುಣ ಕ್ಷೇತ್ರದಲ್ಲಿ 70 ಎಕರೆ ಭೂಮಿ ಅಕ್ರಮವಾಗಿ ವಶ ಪಡಿಸಿಕೊಂಡಿದ್ದಾರೆ. ಅದು ಎಸ್‍ಇಎಸ್‍ಟಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವರ ಜಮೀನಿನಲ್ಲಿ ತಮಿಳರು ಕೆಲಸ ಮಾಡುತ್ತಿರುವುದು. ಆದರೆ ಕನ್ನಡದ ನಾಡು ನುಡಿ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಬೆಂಗಳೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡಿದ್ದಾರೆ ಎನ್ನುವುದರ ಬಗ್ಗೆ ನನ್ನ ಕಡೆ ದಾಖಲೆಗಳಿವೆ. ಸಿಎಂ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ರೆ ಹುಷಾರ್. ಯಾರ್ಯಾರ ಕಾಲು ಹಿಡಿದು ಕೆಲಸ ಮಾಡಿಕೊಂಡಿದ್ದೀರಿ ಎನ್ನುವುದು ಗೊತ್ತಿದೆ. ನಮ್ಮ ಮುಖ್ಯಮಂತ್ರಿಗಳು ಕೆಲಸ ಮಾಡಿಕೊಟ್ಟಾಗ ಕೊಂಡಾಡಿದ್ದೀರಿ ಎಂದು ವಾಟಾಳ್ ವಿರುದ್ಧ ರೇಣುಕಾಚಾರ್ಯ ಸಿಡಿಮಿಡಿಗೊಂಡರು.

ಸಿಎಂಗೆ ಯತ್ನಾಳ್ ಡೆಡ್ ಲೈನ್ ನೀಡಿದ ಕುರಿತು ಪ್ರತಿಕ್ರಿಯಿಸಿ, ಯತ್ನಾಳ್ ಕೇಂದ್ರ ಮಾಜಿ ಸಚಿವರು ಶಾಸಕರು ಯಾಗಿ ಅನುಭವ ಇದೆ. ಯತ್ನಾಳ್ ಡೆಡ್ ಲೈನ್ ಕೊಡುವುದು ಸರಿಯಲ್ಲ. ನಮ್ಮ ಪಕ್ಷದ ಮುಖಂಡರನ್ನು ಗೌರವಿಸಬೇಕು. ಹಾದೀಲಿ ಬೀದಿಲಿ ನಿಂತು ಮಾತನಾಡುವುದರಿಂದ ಪಕ್ಷದ ಗೌರವ ಕಡಿಮೆಯಾಗುವುದಿಲ್ಲ. ಯಾರು ಮಾತನಾಡುತ್ತಾರೋ ಅವರ ವರ್ಚಸ್ಸು ಕಡಿಮೆಯಾಗುತ್ತೆ. ಇದು ಪಕ್ಷಕ್ಕೆ ಶೋಭೆ ತರುವ ವಿಚಾರವಲ್ಲ. ಬಸ್ಸಿನಲ್ಲಿ ಟವಲ್ ಹಾಕಿ ಅಭ್ಯಾಸ, ಇಲ್ಲಿ ಸೀಟ್ ಖಾಲಿ ಇಲ್ಲ. ಮುಖ್ಯಮಂತ್ರಿಗಳ ಕುರ್ಚಿ ಕೂಡ ಖಾಲಿ ಇಲ್ಲ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ನಿಗಮಕ್ಕೆ 500 ಕೋಟಿ ಬಿಡುಗಡೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಚರ್ಚೆ ಮಾಡಿ ಹಣ ಬಿಡುಗಡೆ ಮಾಡಿದ್ದಾರೆ. ಕೊಟ್ಟಿದ್ದು ತಪ್ಪೇನಿಲ್ಲ. ಅಂದು ಬಸವಣ್ಣನವರು ಸಾಮಾಜಿಕ ನ್ಯಾಯ ಕೊಟ್ಟಿದ್ದರು. ಅದೇ ರೀತಿ ಇಂದು ಯಡಿಯೂರಪ್ಪ ನವರು ನೀಡಿದ್ದಾರೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರನ್ನು ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು.

ಇದೇ ವೇಳೆ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪದೇ ಪದೇ ಆ ವ್ಯಕ್ತಿ ಹೆಸರು ನನ್ನ ಬಾಯಲ್ಲಿ ಹೇಳುಸ್ತಿರಿ. ನಾನು ರಾಜ್ಯದ ಅಧ್ಯಕ್ಷರಿಗೆ ಹಾಗೂ ಸಿಎಂಗೆ ಹೇಳಿದ್ದೇನೆ. ಯಾರು ಎರಡು ಮೂರು ಬಾರಿ ಶಾಸಕರಾಗಿದ್ದಾರೋ ಅವರಿಗೆ ಸಚಿವ ಸ್ಥಾನ ನೀಡಲಿ. ಸಂವಿಧಾನವಾಗಿ ಎಲ್ಲರಿಗೂ ಅವಕಾಶ ನೀಡಿ. ಸೋತವರಿಗೆ ಸಚಿವ ಸ್ಥಾನ ನೀಡಬಾರದು, ಹಾಗಾದ್ರೆ ನಾವು ಸೋಲ್ತಿವಿ ಬಿಡಿ. ಕೊಡುಗೆ ಇದೆ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಸೋತವರು ಮಾತ್ರ ಸಮರ್ಥರಾ, ನಾವು ಸಮರ್ಥರಲ್ವಾ. ಅವರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರೆ, ನಾವು 107 ಶಾಸಕರು, ಪಕ್ಷದ ಕಾರ್ಯಕರ್ತರು, ಏನ್ ಮಾಡಿದ್ದೇವೆ. ಪಕ್ಷಕ್ಕಾಗಿ ಶ್ರಮಿಸಿದ್ದಾರೆ ಆದರೆ ಸೋತಂತಹ ಒಬ್ಬ ವ್ಯಕ್ತಿಯಿಂದಲ್ಲ ಎಂದು ಸಿಪಿ ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *