ತಳ್ಳುಗಾಡಿ ಮೇಲೆ ದ್ವಿಚಕ್ರ ವಾಹನ- ಅತಿಥಿ ಉಪನ್ಯಾಸಕರಿಂದ ಅಣಕು ಶವಯಾತ್ರೆ

Public TV
1 Min Read

– ಬೆಲೆ ಏರಿಕೆ ಖಂಡಿಸಿ ವಿಭಿನ್ನ ಪ್ರತಿಭಟನೆ

ಉಡುಪಿ: ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಉಡುಪಿಯಲ್ಲಿ ವಿಭಿನ್ನ ರೀತಿಯಲ್ಲಿ ಖಂಡಿಸಿ ಪ್ರತಿಭಟಿಸಲಾಯಿತು. ಉಡುಪಿ ಜಿಲ್ಲಾ ನಾಗರಿಕ ವೇದಿಕೆ ಈ ಪ್ರತಿಭಟನೆಯ ನೇತೃತ್ವ ವಹಿಸಿತು.

ಜೋಡುಕಟ್ಟೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಉಡುಪಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಜ್ಜರಕಾಡು ಹುತಾತ್ಮ ವೇದಿಕೆ ಬಳಿ ಪ್ರತಿಭಟನಾ ಮೆರವಣಿಗೆ ಸಮಾಪನಗೊಂಡಿತು. ತಳ್ಳುಗಾಡಿಯಲ್ಲಿ ಮೋಟಾರ್ ಬೈಕ್, ಗ್ಯಾಸ್ ಸಿಲಿಂಡರ್ ಪ್ರತಿಭಟನಾಕಾರರು ವಿಭಿನ್ನವಾಗಿ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪೆಟ್ರೋಲ್ ಹಾಕಿ ವಾಹನ ಚಲಾಯಿಸಲು ಸಾಧ್ಯವಿಲ್ಲ, ತಳ್ಳುಗಾಡಿಯ ಮೇಲೆ ದ್ವಿಚಕ್ರ ವಾಹನ ಇಟ್ಟು ತಳ್ಳುತ್ತಾ ಹೋಗುವ ಪರಿಸ್ಥಿತಿ ಇದೆ ಎನ್ನುವುದನ್ನು ಮಾರ್ಮಿಕವಾಗಿ ಹೇಳಿದರು.

ಪ್ರತಿಭಟನೆಗೆ ರಾಜ್ಯದ ಅತಿಥಿ ಉಪನ್ಯಾಸಕರು ಕೈಜೋಡಿಸಿದ್ದು ರಾಜ್ಯ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ ನಡೆಸಿದರು. ಸಂಬಳ ಪಡೆಯದೇ, ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ನಮ್ಮ ಹೆಣದ ಯಾತ್ರೆಯನ್ನು ನಾವೇ ಮಾಡುವಂತಹ ಪರಿಸ್ಥಿತಿ ಇದೆ ಎಂಬುದನ್ನು ತೆರೆದಿಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ನಿತ್ಯಾನಂದ ವಳಕಾಡು, ದೇಶದಲ್ಲಿ ಕೊರೊನಾ ಮಹಾಮಾರಿ ಬಂದು ಜನಸಾಮಾನ್ಯರಿಗೆ ಬಹಳ ಕಷ್ಟವಾಗಿದೆ. ದುರ್ಗಮ ಸಂದರ್ಭದಲ್ಲಿ ಸರ್ಕಾರ ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ಮಾಡುವುದು, ಅಡುಗೆ ಅನಿಲದ ಬೆಲೆ ಏರಿಸಿರುವುದು ಖಂಡನೀಯ ಕೂಡಲೇ ಬೆಲೆ ತಿಳಿಸಬೇಕು. ಜನಸಾಮಾನ್ಯರಿಗೆ ಬದುಕುವ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *