ತಮಿಳುನಾಡಿನಲ್ಲಿ ಕಮಲ ಅರಳಿಸಲು ಅಖಾಡಕ್ಕೆ ಇಳಿದ ಶಾ

Public TV
1 Min Read

– ಎಐಎಡಿಎಂಕೆ, ಬಿಜೆಪಿ ಮೈತ್ರಿ

ಚೆನ್ನೈ: ಮೋದಿ ಅಧಿಕಾರದ ಅವಧಿಯಲ್ಲಿ ತಮಿಳುನಾಡು ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟಿರುವ ಗೃಹ ಮಂತ್ರಿ ಅಮಿತ್ ಶಾ ಇಂದಿನಿಂದ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಎರಡು ದಿನಗಳ ಕಾಲ ತಮಿಳುನಾಡು ಪ್ರವಾಸದಲ್ಲಿರುವ ಅಮಿತ್ ಶಾ ಇಂದು 70 ಸಾವಿರ ಕೋಟಿ ರೂ ಮೊತ್ತ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮೋದಿ ಸರ್ಕಾರ ತಮಿಳುನಾಡಿಗೆ ನೀಡಿದ ನೆರವನ್ನು ಉಲ್ಲೇಖಿಸಿ ಭಾಷಣ ಮಾಡಿದರು.

ಮೋದಿ ಸರ್ಕಾರ ನೀಲಿ ಕ್ರಾಂತಿ ಮಾಡಲು ಮುಂದಾಗಿದೆ. ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಮೀನೂಗಾರಿಕಾ ಸಚಿವಾಲಯವನ್ನು ತೆರೆದಿದ್ದು ರಾಜ್ಯಕ್ಕೆ 20 ಸಾವಿರ ಕೋಟಿ ಅನುದಾನವನ್ನು ನೀಡಲಾಗುವುದು. ಸಾಗರಮಾಲಾ ಯೋಜನೆಯ ಅಡಿ 2.25 ಲಕ್ಷ ಕೋಟಿ ಹೂಡಿಕೆ ಮಾಡಿದ್ದು ಮೂಲ ಸೌಕರ್ಯ ಅಭಿವೃದ್ಧಿ ಆಗಲಿದೆ. ಇದರಿಂದಾಗಿ ರಾಜ್ಯದ ರಸ್ತೆ, ವಿಮಾನ ನಿಲ್ದಾಣ, ಬಂದರುಗಳು ರೂಪಾಂತರವಾಗಲಿದೆ ಎಂದು ತಿಳಿಸಿದರು.

10 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ ಒಟ್ಟು 95 ಸಾವಿರ ಕೋಟಿ ರೂ. ಹಣವನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಮೂಲ ಸೌಕರ್ಯಕ್ಕಾಗಿ 90 ಸಾವಿರ ಕೋಟಿ ರೂ. ಅನುದಾನವನ್ನು ತಮಿಳುನಾಡಿಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಎಐಎಡಿಎಂಕೆ- ಬಿಜೆಪಿ ಮೈತ್ರಿ
2021ರ ಚುನಾವಣೆಯಲ್ಲಿ ಎಐಎಡಿಎಂಕೆಯ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಎಐಎಡಿಎಂಕೆ ಮುಖಂಡ ಒ ಪನ್ನೀರ್‌ಸೆಲ್ವಂ ಮೈತ್ರಿ ಮಾಡುವ ಬಗ್ಗೆ ಅಧಿಕೃತವಾಗಿ ಅಮಿತ್‌ ಶಾ ಸಮ್ಮುಖದಲ್ಲಿ ಘೋಷಿಸಿದರು.

ಡಿಎಂಕೆಯ ಸ್ಟಾಲಿನ್‌ ಸಿಎಂ ಪಟ್ಟದ ಕನಸು ಕಾಣುತ್ತಿದ್ದರೆ ಇತ್ತ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆ ಮೂರನೇ ಬಾರಿ ಅಧಿಕಾರಕ್ಕೆ ಏರಲು ಮುಂದಾಗುತ್ತಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 234 ಕ್ಷೇತ್ರಗಳ ಪೈಕಿ ಎಐಎಡಿಎಂಕೆ ಏಕಾಂಗಿಯಾಗಿ 124 ಕ್ಷೇತ್ರಗಳನ್ನು ಗೆದ್ದಿದ್ದರೆ ಡಿಎಂಕೆ 97, ಕಾಂಗ್ರೆಸ್‌ 7 ಸ್ಥಾನಗಳನ್ನು ಗೆದ್ದುಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *