ತಬ್ಲಿಘಿಗಳ ನಂತರ ಮಲೆನಾಡಿಗೆ ಮುಂಬೈ ನಂಟಿನ ಕಂಟಕ

Public TV
2 Min Read

– ಶಿವಮೊಗ್ಗ ಜಿಲ್ಲೆಯಲ್ಲಿ 12ಕ್ಕೇರಿದ ಸೋಂಕಿತರ ಸಂಖ್ಯೆ
– ಇಂದು ಮೂವರಿಗೆ ಸೋಂಕು

ಶಿವಮೊಗ್ಗ: ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದ ದಿನದಿಂದಲೂ ಮಲೆನಾಡಿನ ಶಿವಮೊಗ್ಗ ಜಿಲ್ಲೆ ಗ್ರೀನ್ ಝೋನ್ ನಲ್ಲಿತ್ತು. ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಒಂದೆಡೆ ಅಹಮದಾಬಾದ್‍ನ ತಬ್ಲಿಘಿಗಳು, ಮತ್ತೊಂದೆಡೆ ಮುಂಬೈನಿಂದ ಬಂದ ವಲಸೆ ಕಾರ್ಮಿಕರು ಮಲೆನಾಡಿನ ಮಂದಿಗೆ ಕಂಟಕವಾಗಿ ಕಾಡುತ್ತಿದ್ದಾರೆ. ಹೀಗಾಗಿ ಇಂದು ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೇರಿದೆ.

ಕೊರೊನಾ ಕಾಣಿಸಿಕೊಂಡ ಆರಂಭದಿಂದಲೂ ಜಿಲ್ಲೆ ಹಸಿರು ವಲಯದಲ್ಲಿತ್ತು. ಸರ್ಕಾರ ಲಾಕ್‍ಡೌನ್ ಸಡಿಲಗೊಳಿಸಿದ ನಂತರ ಹೊರ ರಾಜ್ಯಗಳಲ್ಲಿದ್ದ ಜಿಲ್ಲೆಯ ಜನ ಶಿವಮೊಗ್ಗಕ್ಕೆ ಬರಲಾರಂಭಿಸಿದರು. ಹೀಗಾಗಿ ಗುಜರಾತ್‍ನ ಅಹಮದಾಬಾದ್ ನಿಂದ ಬಂದ 8 ಮಂದಿ ತಬ್ಲಿಘಿಗಳಿಗೆ ಮೊದಲು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತು. ಒಂದೇ ದಿನ 8 ಪಾಸಿಟಿವ್ ಪತ್ತೆಯಾಗಿದ್ದು, ಜಿಲ್ಲೆಯ ಜನತೆಗೆ ಆತಂಕ ಸೃಷ್ಟಿಯಾಗುವಂತೆ ಮಾಡಿತು. ಆದರೆ ಜಿಲ್ಲಾಡಳಿತ ತಬ್ಲಿಘಿಗಳು ಎಲ್ಲೂ ಹೋಗದಂತೆ ಕ್ವಾರಂಟೈನ್ ಮಾಡುವ ಮೂಲಕ ಅನಾಹುತ ತಪ್ಪಿಸಿತು.

ತಬ್ಲಿಘಿಗಳಾಯ್ತು ಇದೀಗ ಮುಂಬೈ ನಂಟು ಮಲೆನಾಡಿಗರಿಗೆ ಕಂಟಕವಾಗಿದೆ. ಮುಂಬೈನಿಂದ ತೀರ್ಥಹಳ್ಳಿ ತಾಲೂಕಿನ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಗೆ ಶುಕ್ರವಾರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಮೂರು ದಿನಗಳ ಹಿಂದೆ ಮುಂಬೈನಿಂದ ಆಗಮಿಸಿದ್ದ, ರಿಪ್ಪನ್ ಪೇಟೆ ಸಮೀಪ ಕ್ವಾರಂಟೈನ್ ಗೆ ಒಳಗಾಗಿದ್ದ ಮೂವರಿಗೆ ಕೊರೊನಾ ಸಂಕು ಇರುವುದು ಪತ್ತೆಯಾಗಿದೆ. ಇದರಲ್ಲಿ ಹೊಸನಗರ ತಾಲೂಕಿನ 42 ವರ್ಷದ ರೋಗಿ ನಂ.1089 ಹಾಗೂ 4 ವರ್ಷದ ರೋಗಿ ನಂ.1090 ಹೆಣ್ಣು ಮಗುವಿಗೂ ಸೋಂಕು ತಗುಲಿದೆ. ಅಲ್ಲದೆ ಸಾಗರದ 38 ವರ್ಷದ ಮಹಿಳೆ ರೋಗಿ ನಂ.1088 ಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇಂದು ಪತ್ತೆಯಾದ ಮೂವರ ಜೊತೆ 12 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದು, ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಯ ಐಸೋಲೇಷನ್ ನಲ್ಲಿ ಇಡಲಾಗಿದೆ.

ಮಲೆನಾಡಿನ ಮಂದಿಗೆ ಹೊರಗಿನವರೇ ಕಂಟಕವಾಗಿ ಕಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಯಾವೊಬ್ಬ ಸ್ಥಳೀಯರಿಗೆ ಪಾಸಿಟಿವ್ ಇರುವುದು ಪತ್ತೆಯಾಗಿಲ್ಲ. ಬದಲಿಗೆ ಹೊರಗಿನಿಂದ ಬಂದವರಿಗೆ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಜನತೆ ಮೈಮರೆಯದೇ ಜಾಗೃತರಾಗಿರಬೇಕು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *