ತಪ್ಪಾಯ್ತು ಕ್ಷಮಿಸಿ ಬಿಡಿ – ಕಣ್ಣೀರಿಟ್ಟು ಕ್ಷಮೆಯಾಚಿಸಿದ ನಟ ವಿಜಯ್ ರಂಗರಾಜು

Public TV
2 Min Read

ಬೆಂಗಳೂರು: ಸಾಹಸಿಂಹ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಈ ಬೆನ್ನಲ್ಲೇ ನಟ ಪರಿಪರಿಯಾಗಿ ಕ್ಷಮೆಯಾಚಿಸಿದ್ದಾರೆ.

ಈ ಸಂಬಂಧ ವೀಡಿಯೋ ಮಾಡಿರುವ ನಟ, ಕರ್ನಾಟಕದ ಜನತೆ, ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಬಳಿ ಕ್ಷಮೆಯಾಚಿಸಿದ್ದಾರೆ. ವೀಡಿಯೋದಲ್ಲಿಯೇ ಅಡ್ಡಬಿದ್ದು ನನ್ನಿಂದ ತಪ್ಪಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ವೀಡಿಯೋದಲ್ಲಿ ಏನಿದೆ..?
ಕರ್ನಾಟಕದ ಜನರು, ಕರ್ನಾಟಕದ ಮಕ್ಕಳಿಗೆ ನಮಸ್ಕಾರ. ವಿಜಯ್ ರಂಗರಾಜು ಮಾತಾಡ್ತಾ ಇದ್ದೀನಿ. ನಾನು ತುಂಬಾ ದೊಡ್ಡ ತಪ್ಪು ಮಾಡಿ, ಆ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ. ಕೊರೊನಾದಿಂದಾಗಿ ಮಾಸ್ಕ್ ಹಾಕಿಕೊಂಡಿದ್ದೇನೆ. ನಿಮಗೆ ನನ್ನ ಮುಖ ತೋರಿಸಬಾರದು ಅಂತೇನೂ ಅಲ್ಲ. ಕೊರೊನಾದಿಂದಾಗಿ ನೋವು ಅನುಭವಿಸುತ್ತಿದ್ದೇನೆ. ನಾನು ದೊಡ್ಡ ಪಾಪ ಮಾಡಿದ್ದೇನೆ. ನಾನು ಇಂಡಸ್ಟ್ರಿಗೆ ಬಂದು ತುಂಬಾ ವರ್ಷ ಆಗಿದೆ. ಫೈಟರ್ ಆಗಿಯೇ ಬಂದೆ ನಾನು. ನಾನೇನೂ ದೊಡ್ಡ ನಟ ಅಲ್ಲ. ಕೆಲ ವ್ಯಾಪಾರಗಳನ್ನು ಮಾಡಿ ಎಲ್ಲಾ ಕಳೆದುಕೊಂಡೆ. ನಂತರ ಲಂಡನ್‍ಗೆ ಹೋಗಿ 5 ವರ್ಷ ಇದ್ದೆ. ತುಂಬಾ ಕಷ್ಟ ಪಟ್ಟಿದ್ದೇನೆ. ರಸ್ತೆಯಲ್ಲಿ ಕಸ ಗುಡಿಸಿದ್ದೇನೆ, ಟಾಯ್ಲೆಟ್ ತೊಳೆದಿದ್ದೇನೆ. ಆದರೆ ನನ್ನ ಕಷ್ಟ ಪರಿಹಾರ ಆಗ್ಲಿಲ್ಲ.

ನಾನು ಆ ದಿನ, ‘ಅವರನ್ನು’ ಹಿಡಿದುಕೊಳ್ಳಲಿಲ್ಲ…ಅಷ್ಟು ದೊಡ್ಡ ವ್ಯಕ್ತಿಯನ್ನು ಹಿಡಿದುಕೊಂಡಿದ್ರೆ, ಅಲ್ಲಿ ಯುನಿಟ್‍ನವರು ನನ್ನನ್ನು ಸುಮ್ಮನೆ ಬಿಡ್ತಿದ್ರಾ..? ಆಗಲೇ ನನ್ನ ಅಲ್ಲಿದ್ದವರು ಸಾಯಿಸಿಬಿಡುತ್ತಿದ್ರು. ಆದರೆ ತುಂಬಾ ವರ್ಷಗಳ ನಂತರ, ಯಾಕಂದ್ರೆ ನಾನು ನಟಿಸಬೇಕಿದ್ದ ಶಾಟ್‍ನಲ್ಲಿ ನಟಿಸಿದ್ದ ಇನ್ನೊಬ್ಬ ಒಂದು ವಾರದ ನಂತರ ಸತ್ತು ಹೋಗಿದ್ದ. ಆ ಕೋಪ ಹಾಗೇ ಉಳಿದುಬಿಟ್ಟಿತ್ತು. ಏನೋ ಮಾತಿನ ಪ್ಲೋನಲ್ಲಿ ಆ ರೀತಿ ಹೇಳಿಬಿಟ್ಟೆ. ನನ್ನ ದಯಮಾಡಿ ಕ್ಷಮಿಸಿ, ನಿಮ್ಮ ಕಾಲು ಮುಟ್ಟಿ ಬೇಡಿಕೊಳ್ತಿದ್ದೇನೆ. ಪ್ರತಿಯೊಬ್ಬರಿಗೂ ಕಾಲಿಗೆ ಬಿದ್ದು ನಮಸ್ಕಾರ ಮಾಡ್ತಿದ್ದೀನಿ. ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ಭಾರತಿ ಅಮ್ಮನವರಿಗೂ ಕೂಡ ‘ಸಾರಿ’ ಕೇಳ್ತಿದ್ದೀನಿ. ಯಾಕಂದ್ರೆ ಇಂತಹ ದೊಡ್ಡ ಸುಳ್ಳು ಯಾರೂ ಹೇಳಬಾರದು. ಆದರೆ ನಾನು ಹೇಳಿದ್ದೀನಿ.. ಐ ಆಮ್ ಸಾರಿ, ನನ್ನ ಕ್ಷಮಿಸಿಬಿಡಿ… ನನ್ನ ಕ್ಷಮಿಸಿಬಿಡಿ..ನನ್ನ ಕ್ಷಮಿಸಿಬಿಡಿ.. ಸುದೀಪ್ ಅವರೇ, ರಾಜ್‍ಕುಮಾರ್ ಅವರ ಮಗ ಪುನೀತ್ ರಾಜ್‍ಕುಮಾರ್ ಅವರೇ ಎಲ್ಲಾ ದೊಡ್ಡವರು ನನ್ನ ಕ್ಷಮಿಸಿ. ನನ್ನ ಕ್ಷಮಿ ಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

ನಟ ಹೇಳಿದ್ದೇನು?
ತೆಲುಗು ಚಿತ್ರರಂಗದ ನಟ ವಿಜಯ್ ರಂಗರಾಜು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ವೈರಲ್ ಆಗಿದೆ. ಇದನ್ನು ಗಮನಿಸಿದ ಸ್ಯಾಂಡಲ್‍ವುಡ್ ತಾರೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಶಕಗಳ ಹಿಂದೆ ವಿಷ್ಣುವರ್ಧನ್ ಜೊತೆ ನಟಿಸಿದ್ದಾಗಿ ಹೇಳಿಕೊಂಡಿದ್ದು, ಇದೇ ವೇಳೆ ವಿಷ್ಣುವರ್ಧನ್ ಅವರ ನಡತೆ ಬಗ್ಗೆ ಆಕ್ಷೇಪಣೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಅಂದು ವಿಷ್ಣುವರ್ಧನ್ ಕಾಲರ್ ಹಿಡಿದು ಜಗಳ ಮಾಡಿದ್ದಾಗಿ ಸಹ ಹೇಳಿದ್ದಾರೆ. ಹೀಗಾಗಿ ಆಕ್ರೋಶ ಭುಗಿಲೆದ್ದಿದೆ.

ವಿಷ್ಣುಸೇನೆ, ವಿಷ್ಟುವರ್ಧನ್ ಅಭಿಮಾನಿಗಳು ನಟನ ವಿರುದ್ಧ ಹಲವು ಕಡೆ ದೂರು ದಾಖಲಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಸಹ ದೂರು ದಾಖಲಿಸಿಕೊಂಡಿದೆ. ಅಲ್ಲದೆ ಸ್ಯಾಂಡಲ್‍ವುಡ್ ನಟರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ವಿಜಯ್ ಕ್ಷಮೆಯಾಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *