ತಂದೆಯನ್ನ ಕೊಂದವನನ್ನೇ ತಾಯಿ ಮದ್ವೆ ಆಗಿ ಮೆರವಣಿಗೆ ಹೊರಟಂತಿದೆ- ಹಳ್ಳಿಹಕ್ಕಿ ಹೀಗಂದಿದ್ಯಾಕೆ?

Public TV
2 Min Read

ಮೈಸೂರು: ಸರ್ಕಾರದ ಇಂದಿನ ಸ್ಥಿತಿಯ ಬಗ್ಗೆ ಎಂಎಲ್‍ಸಿ ಹೆಚ್. ವಿಶ್ವನಾಥ್ ಅವರು ಮಾರ್ಮಿಕವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆಯನ್ನ ಕೊಂದವನನ್ನೆ ತಾಯಿ ಮದುವೆ ಆಗಿ ಮೆರವಣಿಗೆ ಹೊರಟಂತಿದೆ. ನಾವು ವಿರೋಧಿಸಿದವರೇ ಈಗ ಅವರ ಸ್ನೇಹಿತರಾಗಿದ್ದಾರೆ ಎಂದು ಅಸಮಾದಾನ ಹೊರಹಾಕಿದ್ದಾರೆ.

ನಾವು ಯಾರನ್ನು ವಿರೋಧ ಮಾಡಿ ಬಂದ್ವಿ, ಅವರೇ ಈಗ ಬಿಎಸ್‍ವೈ ಸ್ನೇಹಿತರಾಗಿದ್ದಾರೆ. ಇದು ತಂದೆಯನ್ನ ಕೊಂದವನನ್ನ ತಾಯಿ ಮದುವೆಯಾದಂತೆ ಕಾಣುತ್ತಿದೆ. ಶೇಕ್ಸ್‍ಪಿಯರ್ ನಾಟಕದಲ್ಲಿ ಇದೆ ರೀತಿಯ ಪ್ರಸಂಗ ಇದೆ. ನಮ್ಮ ಪರಿಸ್ಥಿತಿ ಹಾಗೂ ಸರ್ಕಾರದ ಪರಿಸ್ಥಿತಿಯೂ ಹಾಗೇ ಇದೆ ಎಂದರು.

ಇದೇ ವೇಳೆ ಮತ್ತೊಮ್ಮೆ ಸಿ.ಪಿ ಯೋಗೇಶ್ವರ್ ವಿರುದ್ಧ ಗುಡುಗಿದ ಹಳ್ಳಿಹಕ್ಕಿ, ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ನೀಡೋಕೆ ಅರ್ಜೆಂಟ್ ಯಾಕೇ?. ಅವರೇನು ಸರ್ಕಾರ ಬಿಳಿಸೋಕೆ ಕಾರಣರಾದವರೇ?, ಅವರೇನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೇ?. ಮುಂಬೈ, ಪುಣೆಯಲ್ಲಿ ಸೂಟ್‍ಕೇಸ್ ಹಿಡ್ಕೊಂಡು ಓಡಾಡುತ್ತಿದ್ದವರು. ಅವರನ್ನ ಮಂತ್ರಿ ಮಾಡೋಕೆ ಅರ್ಜೆಂಟ್ ಯಾಕೇ ಬೇಕು. ಬಿಜೆಪಿ ಸರ್ಕಾರ ಬರೋದಕ್ಕೆ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಅವನ ಪಾತ್ರ ಏನು ಇಲ್ಲದ ಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ಕೊಡಬೇಕು ಎಂದು ಕಿಡಿಕಾರಿದ್ದಾರೆ.

ಯತ್ನಾಳ್ ಅಥವಾ ಕತ್ತಿಯಂತಹ ನಾಯಕರು ಸರತಿಯಲ್ಲಿದ್ದಾರೆ. ಅವರನ್ನು ಮಂತ್ರಿ ಮಾಡಿ. ಇಂತಹ ಆತುರದ ನಿರ್ಧಾರ ತೆಗೆದುಕೊಂಡರೆ ನಿಮ್ಮ ನಾಯಕತ್ವದ ಬಗ್ಗೆ ಅಪನಂಬಿಕೆ ಬರಲಿದೆ ಎಂದು ಸಿಎಂ ಯಡಿಯೂರಪ್ಪಗೆ ನೇರವಾಗಿ ಸಲಹೆ ನೀಡಿದರು. ಕೋರ್ಟ್ ಮಧ್ಯಂತರ ತೀರ್ಪಿನ ಆದೇಶ ನೋಡಿದ್ದೇನೆ. ಅದರ ತೀರ್ಪಿನ ಆರ್ಡರ್ ಕಾಪಿ ಇನ್ನೂ ನನ್ನ ಕೈಸೇರಿಲ್ಲ. ಅದರಲ್ಲಿ ಸಚಿವರಾಗಬಾರದು ಅಂತ ಮಾತ್ರ ಹೇಳಿದ್ದಾರೆ. 2027ರವರೆಗೆ ನಾನು ವಿಧಾನಪರಿಷತ್ ಸ್ಥಾನಕ್ಕೆ ತೊಂದರೆಯಿಲ್ಲ ಎಂದರು.

ಸರ್ಕಾರದ ರಚನೆ ಸಂದರ್ಭದಲ್ಲಿ ಬಿಎಸ್‍ವೈ ನನ್ನ ಮುಂದೆ ನಿಂತಿದ್ದ ಸ್ಥಿತಿಯೇ ಬೇರೆ. ಇಂದಿನ ಬಿಎಸ್‍ವೈ ನಡವಳಿಕೆಗಳೇ ಬೇರೆ. ರಾಜಕಾರಣದಲ್ಲಿ ಕೃತಜ್ಞತೆ ಕಡಿಮೆ ಆಗುತ್ತಿದೆ. ನಾವು ಮಾಡಿದ ಕೆಲಸವನ್ನ ಯಾರು ಕೃತಜ್ಞತೆ ಮಾಡಿಕೊಂಡಿಲ್ಲ. ಯಡಿಯೂರಪ್ಪನವರೇ ಮೇಲೆ ಒತ್ತಡ ಇದೆ. ಅದಕ್ಕೆ ಈಗ ಏನಾಗುತ್ತೆ ನೋಡಿಕೊಂಡು ತೀರ್ಮಾನ ಮಾಡ್ತೀವಿ ಎಂದು ಸಿಎಂ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸಾ.ರಾ.ಮಹೇಶ್ ನನ್ನ ಅನುಭವದ ಮುಂದೆ ನನಗೆ ಸಮಾನಲ್ಲ. ಅಂತವರ ಬಗ್ಗೆ ನಾನು ಪ್ರತಿಕ್ರಿಯೆಯನ್ನೆ ನೀಡೋಲ್ಲ. ಆತ ನಮ್ಮ ಊರಿನವನು ಅಲ್ವಾ. ಅದಕ್ಕೆ ನನ್ನ ಮೇಲಿನ ಪ್ರಿತಿಯಿಂದ ಪದೆ ಪದೆ ಮಾತನಾಡುತ್ತಾನೆ. ಆದ್ರೆ ಅವನ ಬಗ್ಗೆ ನನ್ನ ಬಳಿ ಪ್ರಶ್ನೆಯನ್ನೆ ಕೇಳಬೇಡಿ ಎಂದು ಪತ್ರಕರ್ರರ ಮುಂದೆ ಕೈಮುಗಿದರು.

Share This Article
Leave a Comment

Leave a Reply

Your email address will not be published. Required fields are marked *