ಡ್ರೆಸ್ಸಿಂಗ್ ರೂಮಿನಲ್ಲಿ ಇ-ಸಿಗರೇಟ್ ಸೇದಿದ ಫಿಂಚ್ – ವಿಡಿಯೋ ವೈರಲ್

Public TV
1 Min Read

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಆರೋನ್ ಫಿಂಚ್ ಅವರು ಇ-ಸಿಗರೇಟ್ ಸೇದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಫಿಂಚ್ ಅವರು ಇ-ಸಿಗರೇಟ್ ಸೇದಿ ಹೊಗೆ ಬಿಟ್ಟಿರುವ ವಿಡಿಯೋ ಈಗ ಟ್ವಿಟ್ಟರಿನಲ್ಲಿ ಸಖತ್ ಸದ್ದು ಮಾಡುತ್ತಿದೆ.

ಭಾನುವಾರದ ಪಂದ್ಯದಲ್ಲಿ ರಾಜಸ್ಥಾನ್ ಕೊಟ್ಟ ಟಾರ್ಗೆಟ್ ಅನ್ನು ಬೆನ್ನಟ್ಟುತ್ತಿದ್ದಾಗ 14 ರನ್‍ಗಳಿಸಿದ್ದ ಫಿಂಚ್ ಔಟ್ ಆಗಿ ಡ್ರೆಸಿಂಗ್ ರೂಮ್ ಸೇರಿದ್ದರು. ಈ ವೇಳೆ ಅವರು ಇ-ಸಿಗರೇಟ್ ಸೇದುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಭಾರತದಲ್ಲಿ ಇ-ಸಿಗರೇಟ್ ಸೇದುವುದು ನಿಷೇಧವಾಗಿದೆ. ಅದೇ ರೀತಿ ಯುಎಇಯಲ್ಲೂ ಕೂಡ ಇ-ಸಿಗರೇಟ್ ಬ್ಯಾನ್ ಆಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಆದರೆ ಕೆಲ ದೇಶದಲ್ಲಿ ಇ-ಸಿಗರೇಟ್ ಸೇದಲು ಅವಕಾಶವಿದೆ.

ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಾಯಕ ಸ್ಟೀವನ್ ಸ್ಮಿತ್ ಮತ್ತು ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಅವರ ಸ್ಫೋಟಕ ಆಟದಿಂದ ನಿಗದಿತ 20 ಓವರಿನಲ್ಲಿ 177 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡ ಕೊನೆಯಲ್ಲಿ ಎಬಿಡಿ ವಿಲಿಯರ್ಸ್ ಅವರ ಭರ್ಜರಿ ಬ್ಯಾಟಿಂಗ್‍ಯಿಂದ ಇನ್ನು ಎರಡು ಬಾಲ್ ಉಳಿಸಿ 179 ರನ್ ಚಚ್ಚಿತು. ಈ ಮೂಲಕ 7 ವಿಕೆಟ್‍ಗಳ ಜಯದಿಂದ ಅಂಕಪಟ್ಟಿಯಲ್ಲಿ 12 ಅಂಕ ಗಳಿಸಿತು.

ಕೊನೆಯ ನಾಲ್ಕು ಓವರಿನಲ್ಲಿ ಬೆಂಗಳೂರು ತಂಡಕ್ಕೆ 54 ರನ್‍ಗಳ ಅವಶ್ಯಕತೆಯಿತ್ತು. ಈ ವೇಳೆ ಎಬಿಡಿ ವಿಲಿಯರ್ಸ್ ಸಿಕ್ಸರ್ ಗಳ ಸುರಿಮಳೆಗೈದರು. ಎಬಿಡಿ ಕೇವಲ 22 ಬಾಲಿಗೆ ಆರು ಸಿಕ್ಸರ್ ಮತ್ತು ಒಂದು ಬೌಂಡರಿ ಸಮೇತ ಬರೋಬ್ಬರಿ 55 ರನ್ ಸಿಡಿಸಿದರು. ಇವರಿಗೆ ಸಾಥ್ ಕೊಟ್ಟ ಗುರ್ಕೀರತ್ 19 ರನ್ ಸಿಡಿಸಿ ಮಿಂಚಿದರು.

Share This Article
Leave a Comment

Leave a Reply

Your email address will not be published. Required fields are marked *