ಡ್ರಗ್ಸ್ ಪ್ರಕರಣ – ಎನ್‍ಡಿಪಿಎಸ್ ಕೋರ್ಟಿಗೆ 2,900 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ

Public TV
2 Min Read

– ರಾಗಿಣಿ ವಿರುದ್ಧದ ಚಾರ್ಜ್‍ಶೀಟ್‍ನಲ್ಲಿ ಏನಿದೆ..?

ಬೆಂಗಳೂರು: ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ್ದ ಡ್ರಗ್ಸ್ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ.

ಹೌದು. ಸ್ಯಾಂಡಲ್‍ವುಡ್ ಡ್ರಗ್ ಕೇಸ್ ಸಂಬಂಧ ಇದೀಗ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಸಿಸಿಬಿ ಅಧಿಕಾರಿಗಳು ಎನ್‍ಡಿಪಿಎಸ್ ಕೋರ್ಟಿಗೆ 2,900 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ. ನಟಿ ರಾಗಿಣಿ, ಸಂಜನಾ ಸೇರಿ 25 ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ.

180 ಸಾಕ್ಷಿಗಳ ಹೇಳಿಕೆ ದಾಖಲಿಸಿರುವ ಸಿಸಿಬಿ ಅಧಿಕಾರಿಗಳು, ಕಾಟನ್ ಪೇಟೆ ಪೊಲೀಸರ ಮೂಲಕ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಹೆಸರೂ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖ ಮಾಡಲಾಗಿದೆ.

ಚಾರ್ಜ್‍ಶೀಟ್‍ನಲ್ಲಿ ಏನಿದೆ..?
2019ರ ಮೇ 26ರಂದು ನಟಿ ರಾಗಿಣಿ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದರು. ಇಂಡಿಯನ್ ಎಕ್ಸ್‍ಪ್ರೆಸ್ ಬಳಿಯ ಹೋಟೆಲ್‍ನಲ್ಲಿ ರವಿಶಂಕರ್ ಜೊತೆ ಪಾರ್ಟಿ ಮಾಡಿರುವ ಹಾಗೂ ಎಕ್ಸ್ಪ್ರೆಸ್ಸಿ ಮಾತ್ರೆಗಳ ಸೇವನೆ ಮಾಡುವುದರ ಜೊತೆ ಹಂಚಿಕೆ ಮಾಡಿರುವುದರ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.

2020ರ ಜುಲೈ 5ರಂದು ಯಲಹಂಕದ ಲೇರೂಮಾ ಹೋಟೆಲ್‍ನಲ್ಲಿ ಪಾರ್ಟಿ, ಆರೋಪಿಗಳ ಜೊತೆ ಡ್ರಗ್ಸ್ ಸೇವನೆ ಮಾಡಿದ್ದಾರೆ. 2020 ಜನವರಿಯಿಂದ ಆಗಸ್ಟ್‍ವರೆಗೂ ಲೂಮ್ ಪೆಪೆ ಸಾಂಬಾಗೆ ಫೋನ್ ಮಾಡಿ ಡ್ರಗ್ಸ್ ಖರೀದಿ ಮಾಡಿದ್ದಾರೆ. ನೈಜೀರಿಯಾದ ಪ್ರಜೆಯಿಂದ ರಾಗಿಣಿ ಡ್ರಗ್ಸ್ ಪಡೆದಿರುವ ಮಾಹಿತಿ ಇದ್ದು, ಇತರೆ ಆರೋಪಿಗಳಿಗೆ ವಾಟ್ಸಾಪ್ ಮೂಲಕ ಮಾದಕ ವಸ್ತು ಕೇಳಿರುವುದು ಐ ಫೋನ್, 11 ಪ್ರೋ ಮ್ಯಾಕ್ಸ್ ಮೊಬೈಲ್ ರಿಟ್ರೀವ್ ಮಾಡಿದಾಗ ಮಾಹಿತಿ ಬಹಿರಂಗವಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಗೆಳೆಯ ರವಿಶಂಕರ್ ಜೊತೆಯಲ್ಲಿ ರಾಗಿಣಿ ಡ್ರಗ್ಸ್ ಡೀಲ್ ಬಗ್ಗೆ ಮಾತನಾಡಿದ್ದಾರೆ. ಮನೆ ರೇಡ್ ವೇಳೆ ಪತ್ತೆಯಾಗಿದ್ದ ಗಾಂಜಾ ತುಂಬಿದ್ದ ಸಿಗರೇಟ್ ಬಗ್ಗೆಯೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ ಚಾರ್ಜ್ ಶೀಟ್ ನ 70ನೇ ಪುಟದಲ್ಲಿ ರಾಗಿಣಿ ಅವರು ನೈಜೀರಿಯಾ ಪ್ರಜೆ ಜೊತೆ ಡ್ರಗ್ಸ್ ಪಡೆಯುವ ಬಗ್ಗೆ ಚಾಟಿಂಗ್ ಮಾಡಿದ್ದಾರೆ. ಇತ್ತ ಗೆಳೆಯ ರವಿಶಂಕರ್ ಜೊತೆಯಲ್ಲಿ ನಟಿ ರಾಗಿಣಿ ಡ್ರಗ್ಸ್ ಡೀಲ್ ಬಗ್ಗೆ ಏನ್ ಮಾತನಾಡಿದ್ದಾರೆ ಅನ್ನೋದನ್ನು ಕೂಡ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಅಲ್ಲದೆ 69 ನೇ ಪೇಜ್‍ನಲ್ಲಿ 2018ರ ಡಿಸೆಂಬರ್ 8ರಂದು ಡ್ರಗ್ಸ್ ಬಗ್ಗೆ ರವಿಶಂಕರ್ ಪತ್ನಿ, ನಟಿ ರಾಗಿಣಿ ವಿರುದ್ಧ ಮಾಡಿರುವ ಚಾಟಿಂಗ್ ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *