ಡ್ರಗ್ಸ್‌ ದಂಧೆಯಲ್ಲಿ ಅಕ್ರಮ ಹಣದ ವಾಸನೆ – ಪ್ರಭಾವಿ ಶಾಸಕನ ಮೇಲೆ ಇಡಿ ಕಣ್ಣು

Public TV
1 Min Read

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಜಾರಿ ನಿರ್ದೆಶನಾಲಯ ಎಂಟ್ರಿ ಕೊಟ್ಟಿದೆ. ಇಂದು ಬೆಳಗ್ಗೆ ಇಡಿ ಅಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಡ್ರಗ್ಸ್‌ ದಂಧೆ ಪ್ರಕರಣಗಳನ್ನ ಇಡಿ ತನಿಖೆ ನಡೆಸುವುದಿಲ್ಲ. ಇಡಿ ಏನಿದ್ದರೂ ಅಕ್ರಮ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಮಾತ್ರ ನಡೆಸುತ್ತದೆ. ಆದರೆ ಈ ಡ್ರಗ್ಸ್‌ ದಂಧೆಯಲ್ಲೂ ಅಕ್ರಮ ಹಣದ ವಾಸನೆ ಬಡಿಯುತ್ತಿದ್ದಂತೆ ಈಗ ಇಡಿ ಸಹ ಎಂಟ್ರಿ ಕೊಟ್ಟಿದೆ.

ಈ ಪ್ರಕರಣದಲ್ಲಿ ಓರ್ವ ಪ್ರಭಾವಿ ಶಾಸಕನ ಹೆಸರು ಕೇಳಿ ಬಂದಿದೆ. ಈ ಶಾಸಕ ಶ್ರೀಲಂಕಾದಲ್ಲಿರುವ ಕ್ಯಾಸಿನೋ ಜೊತೆ ನೇರ ಸಂಪರ್ಕವಿದ್ದು ಅಕ್ರಮವಾಗಿ ಕೋಟ್ಯಂತರ ರೂ. ಹಣವನ್ನು ಹೂಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ತೆರಿಗೆಯನ್ನು ವಂಚಿಸಿ ಈ ವ್ಯವಹಾರವನ್ನು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಡ್ರಗ್ಸ್‌ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿಗಳ ಜೊತೆ ನಟ, ನಟಿಯರನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಡುತ್ತಿರುವ ವಿಚಾರದಲ್ಲಿ ಈ ಶಾಸಕನೇ ಪ್ರಧಾನ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿಈತನ ಆದಾಯ ಮೇಲೆ ಇಡಿ ಕಣ್ಣು ಇಟ್ಟಿದೆ. ಇದನ್ನೂ ಓದಿ: ನಿಜವಾಗಿಯೂ ಆರೋಗ್ಯ ಸಮಸ್ಯೆ ಇದ್ಯಾ? – ನಟಿಯರ ಹೈಡ್ರಾಮಾಕ್ಕೆ ಇಂದೇ ಬೀಳುತ್ತೆ ತೆರೆ

ಈ ಕಾರಣ ಅಲ್ಲದೇ ಡ್ರಗ್ಸ್‌ಗಳನ್ನು ಡಾರ್ಕ್ ವೆಬ್ ಮೂಲಕ ತರಿಸಿ ಕೊಡಲಾಗುತ್ತಿತ್ತು. ಡಾರ್ಕ್‍ವೆಬ್‍ನಲ್ಲಿ ಡ್ರಗ್ ತರಿಸುತ್ತಿದ್ದ ವ್ಯಕ್ತಿಗಳು ನಗದು, ಡೆಬಿಟ್, ಕ್ರೆಡಿಟ್‍ಕಾರ್ಡ್ ಬಳಸದೇ ಬಿಟ್ ಕಾಯಿನ್‍ಗಳ ಮೂಲಕ ಖರೀದಿಸುತ್ತಿದ್ದರು. ಈ ಡ್ರಗ್ಸ್‌ ವ್ಯವಹಾರದಲ್ಲಿ ಕೋಟ್ಯಂತರ ರೂ. ಹಣ ಅಕ್ರಮವಾಗಿ ಹರಿದು ಹೋಗಿರಬಹುದು ಎಂಬ ಗುಮಾನಿ ಇಡಿಯದ್ದು.

ಅಕ್ರಮ ವ್ಯವಹಾರದ ವಾಸನೆ ಬಡಿಯುತ್ತಿದ್ದಂತೆ ಕಳೆದ ನಾಲ್ಕೈದು ದಿನಗಳಿಂದ ಜಾರಿ ನಿರ್ದೇಶನಾಲಯ ಮಾಹಿತಿ ಕಲೆ ಹಾಕಲು ಮುಂದಾಗತೊಡಗಿತು. ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದ ಇಡಿ ಅಧಿಕಾರಿಗಳು ಈಗ ಸಿಸಿಬಿಯಿಂದ ಮತ್ತಷ್ಟು ಮಾಹಿತಿ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಶೀಘ್ರವೇ ಇಡಿ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *