ಬೆಳಗಾವಿ: ಕಳೆದ ಎರಡು ತಿಂಗಳಿಂದ ಮನೆ ಮಠ ಬಿಟ್ಟು ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಸೇವೆ ಸಲ್ಲಿಸ್ತಾ ಇದ್ದಾರೆ. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ಕೊರೊನಾ ಡ್ಯೂಟಿ ಬೇಡ ಅಂದ್ರೆ ಡಿ ಗ್ರೂಪ್ ನೌಕರರು ಗುತ್ತಿಗೆದಾರರಿಗೆ ಹಣಕೊಡಬೇಕಂತೆ. ಈ ಸಂಬಂಧ ಕೊರೊನಾ ವಾರಿಯರ್ಸ್ ಪಬ್ಲಿಕ್ ಟಿವಿ ಕ್ಯಾಮೆರಾ ಮುಂದೆ ಕಣ್ಣೀರು ಹಾಕಿದ್ದಾರೆ.
ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಸೋಂಕಿತರನ್ನು ಮಹಾಮಾರಿ ವೈರಸ್‍ನಿಂದ ಕಾಪಾಡಲು ಕೊರೊನಾ ವಾರಿಯರ್ಸ್ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸ್ತಿದ್ದಾರೆ. ಆದರೆ ರಕ್ಷಕರಿಗೆ ರಕ್ಷಣೆ ಇಲ್ಲ ಅಂದ್ರೆ ಹೇಗೆ. ಬೆಳಗಾವಿಯಲ್ಲಿ ಕೊರೊನಾ ವಾರಿಯರ್ಸ್‍ಗೆ ರಕ್ಷಣೆ ಇರಲಿ. ಸರಿಯಾಗಿ ಊಟವೂ ಸಿಗ್ತಿಲ್ಲ. ಪರಿಣಾಮ ಕೊರೊನಾ ವಾರಿಯರ್ಸ್ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 114ಕ್ಕೇರಿದೆ. 72 ಆಕ್ಟೀವ್ ಕೇಸ್‍ಗಳಿದ್ದು, 41 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರ ಹಿಂದೆ ವೈದ್ಯರು ಮತ್ತು ನರ್ಸ್ ಗಳ ಶ್ರಮ ಒಂದು ಕಡೆಯಾದ್ರೇ ಡಿ ಗ್ರೂಪ್ ನೌಕರರ ಪರಿಶ್ರಮವೂ ಇದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡೋ ಬಿಮ್ಸ್ ಆಸ್ಪತ್ರೆಯ ಡಿ ಗ್ರೂಪ್ ನೌಕರರು ಕಳೆದ ಎರಡು ತಿಂಗಳಿನಿಂದ ಮನೆಗೂ ಹೋಗಿಲ್ಲ. ಬಿಮ್ಸ್ ಆಡಳಿತ ಮಂಡಳಿ ಒಂದು ರೂಮ್ ಕೊಟ್ಟಿದ್ದನ್ನ ಬಿಟ್ಟರೆ ಸರಿಯಾದ ಊಟದ ವ್ಯವಸ್ಥೆ ಕೂಡ ಮಾಡಿಲ್ಲ. ದಯಮಾಡಿ ನಮಗೆ ಒಳ್ಳೆಯ ಊಟ ಕೊಡಿಸಿ ಸರ್ ಎಂದು ಪಬ್ಲಿಕ್ ಟಿವಿ ಕ್ಯಾಮೆರಾ ಮುಂದೆ ಆಯಾಗಳು ತಮ್ಮ ನೋವು ತೋಡಿಕೊಂಡಿದ್ದಾರೆ.
ಇನ್ನೊಂದು ವಿಚಾರ ಅಂದ್ರೆ, ಸಾಮಾನ್ಯವಾಗಿ ಕೊರೊನಾ ವಾರ್ಡಿಗೆ ಒಂದು ವಾರ ಡ್ಯೂಟಿ ಮಾತ್ರ ಹಾಕಲಾಗುತ್ತೆ. ಆದರೆ ಇಲ್ಲಿ ಹಣ ಕೊಟ್ಟವರಿಗೆ ಕೊರೊನಾ ವಾರ್ಡ್ ಡ್ಯೂಟಿ ಹಾಕುವುದಿಲ್ಲವಂತೆ. ಯಾರು ಗುತ್ತಿಗೆದಾರರಿಗೆ ಹಣ ನೀಡುವುದಿಲ್ಲವೋ ಅಂತವರನ್ನೇ ಪದೇ ಪದೇ ಡ್ಯೂಟಿಗೆ ಹಾಕ್ತಾರಂತೆ. ಇದರ ನಡುವೆ ಕಳೆದ ತಿಂಗಳ ಸಂಬಳ ಕೂಡ ಆಗಿಲ್ಲ. ನಮ್ಮ ಪರಿಸ್ಥಿತಿ ಯಾರಿಗೂ ಬಾರದಿರಲಿ ಅಂತ ಆಯಾಗಳು ಕಣ್ಣೀರು ಹಾಕಿದ್ದಾರೆ.
ಡಿ ಗ್ರೂಪ್ ನೌಕರರು ಶೌಚಾಲಯದಿಂದ ಹಿಡಿದು ವಾರ್ಡ್ ವರೆಗೂ ಕಾರ್ಯನಿರ್ವಹಿಸುತ್ತಾರೆ. ಆದರೆ ಅವರಿಗೆ ಜೀವ ರಕ್ಷಣೆ ಇಲ್ಲದಂತಾಗಿದೆ. ಬರೋ ಸಂಬಳದಲ್ಲಿ ಗುತ್ತಿಗೆದಾರನಿಗೆ ಕಮಿಷನ್ ನೀಡಿ ಡ್ಯೂಟಿ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಇದೆ. ವೈದ್ಯಕೀಯ ಶಿಕ್ಷ ಸಚಿವರು ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.