ಡ್ಯೂಟಿಗೆ ತೆರಳುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡ್ತಿರೋ ಪೊಲೀಸ್

Public TV
2 Min Read

– ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಗರು ಪಿಧಾ

ಬೆಂಗಳೂರು: ಡ್ಯೂಟಿಗೆ ಹೋಗುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್, ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‍ಫೋನ್ ಮತ್ತು ಲ್ಯಾಪ್‍ಟಾಪ್‍ಗಳು ಇಲ್ಲದ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಓದಿ: 3 ಕಿ.ಮೀ ಕಾಲುವೆಯನ್ನು 30 ವರ್ಷ ಅಗೆದು ಗ್ರಾಮಕ್ಕೆ ನೀರು ಹರಿಸಿದ ರೈತ

ಪ್ರತಿದಿನ ಶಾಂತಪ್ಪ ಅವರು ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ತೆರಳುತ್ತಾರೆ. ಆದರೆ ಇದಕ್ಕೂ ಮುಂಚೆ ಅವರು, ಪಶ್ಚಿಮ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿರುವ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಾರೆ. ಸುಮಾರು 30 ಮಕ್ಕಳಿಗೆ ಒಂದು ಗಂಟೆ ಪಾಠ ಮಾಡಿ ಕೆಲಸಕ್ಕೆ ಹೋಗುತ್ತಾರೆ. ಶಾಲೆಯ ಪಠ್ಯಕ್ಕೆ ಅನುಗುಣವಾಗಿ ಪಾಠ ಮಾಡಲು ಸಾಧ್ಯವಾಗದೇ ಇರುವ ಕಾರಣ, ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಗಣಿತದ ಬಗ್ಗೆ ಪಾಠವನ್ನು ಮಾಡುತ್ತಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಶಾಂತಪ್ಪ, ನಾನು 20 ದಿನಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಇಲ್ಲಿರುವ ಕಾರ್ಮಿಕರ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಪಡೆದುಕೊಳ್ಳುವ ಸೌಲಭ್ಯವಿಲ್ಲ. ಈ ಕಾರಣದಿಂದ ನಾನು ಡ್ಯೂಟಿಗೆ ಹೋಗುವ ಒಂದು ಗಂಟೆ ಮುಂಚಿತವಾಗಿ ಇಲ್ಲಿಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ ಎಂದಿದ್ದಾರೆ. ಶಾಂತಪ್ಪ ಪಾಠ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರಿಗೆ ಹೆಚ್ಚು ಕಾರ್ಮಿಕರು ಬರುವುದು ಉತ್ತರ ಕರ್ನಾಟಕ ಬಳ್ಳಾರಿ, ಗದಗ, ಕೊಪ್ಪಳ ಮತ್ತು ರಾಯಚೂರು ಭಾಗಗಳಿಂದ. ನಾನು ಅದೇ ಭಾಗದವನಾದ ಕಾರಣ ಅಲ್ಲಿನ ಕಾರ್ಮಿಕರ ಮಕ್ಕಳ ಕಷ್ಟಗಳೇನು ಎಂಬುದು ನನಗೆ ಚೆನ್ನಾಗಿ ಗೊತ್ತು. ಈ ಕಾರಣಕ್ಕೆ ನಾನು ಈ ಮಕ್ಕಳಿಗೆ ಪಾಠ ಮಾಡಲೂ ನಿರ್ಧಾರ ಮಾಡಿದ್ದೇನೆ ಎಂದು ಶಾಂತಪ್ಪ ತಿಳಿಸಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚಿ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಇವರನ್ನು ಭೇಟಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *