ಡೇವಿಡ್‌ ವಾರ್ನರ್‌ ಔಟ್‌? ನಾಟೌಟ್?‌ – ಚರ್ಚೆಗೆ ಗ್ರಾಸವಾದ ಮೂರನೇ ಅಂಪೈರ್‌ ನಿರ್ಧಾರ

Public TV
2 Min Read

ಅಬುಧಾಬಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ ಔಟ್‌ ನಿರ್ಧಾರ ಈಗ ಚರ್ಚೆಗೆ ಗ್ರಾಸವಾಗಿದೆ.

ತಂಡದ ಮೊತ್ತ 43 ರನ್‌ ಆಗಿದ್ದಾಗ ಮೊಹಮ್ಮದ್‌ ಸಿರಾಜ್‌ ಎಸೆದ ಎಸೆತ ಎದುರಿಸಲು ಡೇವಿಡ್‌ ವಾರ್ನರ್‌ ವಿಫಲರಾದರು. ಕೀಪರ್‌ ಎಬಿ ಡಿವಿಲಿಯರ್ಸ್‌ ಬಲಗಡೆಗೆ ಹಾರಿ ಬಾಲ್‌ ಹಿಡಿದಿದ್ದರು. ಈ ವೇಳೆ ಆರ್‌ಸಿಬಿ ತಂಡ ಮನವಿ ಮಾಡಿದ್ದು ಫೀಲ್ಡ್‌ ಅಂಪೈರ್‌ ನಾಟೌಟ್‌ ತೀರ್ಪು ನೀಡಿದರು.

ನಾಟೌಟ್‌ ತೀರ್ಪು ನೀಡಿದ ಬೆನ್ನಲ್ಲೇ ಕೊಹ್ಲಿ ಡಿಆರ್‌ಎಸ್‌ ಮೊರೆ ಹೊದರು. ಅಲ್ಟ್ರಾ ಎಡ್ಜ್‌ನಲ್ಲಿ ಬಾಲ್‌ ಬಡಿದಿರುವುದು ಸ್ಪಷ್ಟವಾಗಿದ್ದರೂ ಅದು ಗ್ಲೌಸ್‌ಗೆ ತಾಗಿದೆಯೋ ಅಥವಾ ಪ್ಯಾಂಟ್‌ಗೆ ತಾಗಿ ಹೋಗಿದೆಯೋ ಎನ್ನುವುದು ಸ್ಪಷ್ಟವಾಗಿರಲಿಲ್ಲ.

ಯಾವ ನಿರ್ಧಾರ ನೀಡುತ್ತಾರೆ ಎಂದು ಕಾಯುತ್ತಿರುವಾಗ ಮೂರನೇ ಅಂಪೈರ್‌ ಔಟ್‌ ತೀರ್ಮಾನ ನೀಡಿದರು. ಕ್ರಿಕೆಟ್‌ನಲ್ಲಿ ಈಗ ತಂತ್ರಜ್ಞಾನ ಬಳಕೆ ಹೆಚ್ಚಾಗಿದ್ದರೂ ಔಟ್‌ ಎಂದು ಪರಿಗಣಿಸಲು ಸರಿಯಾದ ಸಾಕ್ಷ್ಯಗಳು ಸಿಗದೇ ಇದ್ದಾಗ ಮೂರನೇ ಅಂಪೈರ್‌ ಯಾವುದೇ ನಿರ್ಧಾರ ಪ್ರಕಟಿಸದೇ ಫೀಲ್ಡ್‌ ಅಂಪೈರ್‌ಗಳ ವಿವೇಚನೆಗೆ ಬಿಡುತ್ತಾರೆ. ಈ ವೇಳೆ ಸಾಧಾರಣವಾಗಿ ಫೀಲ್ಡ್‌ ಅಂಪೈರ್‌ ಮೊದಲು ಏನು ನಿರ್ಧಾರ ನೀಡಿರುತ್ತಾರೋ ಆ ನಿರ್ಧಾರವನ್ನೇ ಪ್ರಕಟಸುತ್ತಾರೆ.  ಇದನ್ನೂ ಓದಿ: 3 ವರ್ಷಗಳಾದ್ರೂ ಕಪ್ ಗೆಲ್ಲದ ಆರ್‌ಸಿಬಿ – ಕಾರಣ ಬಿಚ್ಚಿಟ್ಟ ಡರೇನ್ ಸ್ಯಾಮಿ

ಈ ಪಂದ್ಯದಲ್ಲಿ ಔಟ್‌ ಆಗಿದ್ದಾರೆ ಎಂಬುವುದಕ್ಕೆ ಸರಿಯಾದ ಸಾಕ್ಷ್ಯಗಳು ಸಿಗದೇ ಇದ್ದಾಗ ಔಟ್‌ ತೀರ್ಮಾನ ಹೇಗೆ ತೆಗೆದುಕೊಳ್ಳಲಾಯಿತು ಎಂಬ ಪ್ರಶ್ನೆಯನ್ನು ಈಗ ಹಲವರು ಎತ್ತಿದ್ದಾರೆ. ನ್ಯೂಜಿಲೆಂಡ್‌ ತಂಡದ ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಸ್ಕಾಟ್‌ ಸ್ಟೈರಿಸ್, ವಾರ್ನರ್‌‌ ಮೊದಲು ನಾಟೌಟ್‌ ಆಗಿದ್ದರು. ಆದರೆ ಮೂರನೇ ಅಂಪೈರ್‌ ಔಟ್‌ ತೀರ್ಮಾನಕ್ಕೆ ಬಲವಾದ ಅಂಶಗಳು ಇಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ವೀಕ್ಷಕ ವಿವರಣೆಗಾರ ಸೈಮನ್‌ ಡೌಲ್‌ ಬಾಲ್‌ ಗ್ಲೌಸ್‌ಗೆ ಬಡಿದಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ರಾಹುಲ್‌ ಎಂಬವರು ಪ್ಯಾಡ್‌, ಜೆರ್ಸಿ, ಹೊಟ್ಟೆಗೆ ಬಡಿದಂತೆ ಕಾಣಿಸಿದ್ದರಿಂದ ಇದು ಸರಿಯಾದ ಸಾಕ್ಷ್ಯ ಆಗುವುದಿಲ್ಲ. ಸರಿಯಾಗಿ ಕಾಣಿಸದ ಕಾರಣ ಫೀಲ್ಡ್‌ ಅಂಪೈರ್‌ ನೀಡಿದ ನಿರ್ಧಾರವನ್ನು ಬದಲಿಸುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು ಕ್ರಿಕೆಟ್‌ ನಿಯಮದ ಪುಸ್ತಕದಲ್ಲಿ ಬಹುತೇಕ ನಿರ್ಧಾರಗಳು ಬ್ಯಾಟ್ಸ್‌ಮನ್‌ಗಳ ಪರವಾಗಿಯೇ ಇರುತ್ತದೆ. ಕೆಲವೊಂದು ಕ್ಲೋಸ್‌ ಕಾಲ್‌ ಬಂದಾಗ ಬೌಲರ್‌ಗಳನ್ನು ಪರಿಗಣಿಸಿ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್‌ನಲ್ಲಿ ಸಾಕಷ್ಟು ತಂತ್ರಜ್ಞಾನ ಬಂದು ಸುಧಾರಣೆಯಾದರೂ ಕೆಲವೊಮ್ಮೆ ತಂತ್ರಜ್ಞಾನದ ಕಣ್ಣು ನಿಖರವಾಗಿ ನಿರ್ಧಾರ ಪ್ರಕಟಿಸುವಲ್ಲಿ ಸೋಲುತ್ತದೆ ಎಂಬುದಕ್ಕೆ ಈ ಔಟ್‌ ತೀರ್ಮಾನ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

ಈ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ 17 ರನ್‌ ಗಳಿಸಿ ನಿರಾಸೆಯಿಂದ ಪೆವಿಲಿಯನ್‌ ಕಡೆಗೂ ಹೋದರೂ ಹೈದರಾಬಾದ್‌ ತಂಡ 6 ವಿಕೆಟ್‌ಗಳಿಂದ ಜಯಗಳಿಸಿದೆ. ಒಂದು ವೇಳೆ ಪಂದ್ಯ ಫಲಿತಾಂಶ ಬದಲಾಗುತ್ತಿದ್ದರೆ ಈ ನಿರ್ಣಯ ಭಾರೀ ಚರ್ಚೆಗೆ ಕಾರಣವಾಗುತ್ತಿತ್ತು. ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್‌ ಮಾಡಿ.

https://twitter.com/IAryaHarishI/status/1324751153691729920

Share This Article
Leave a Comment

Leave a Reply

Your email address will not be published. Required fields are marked *