ಡೇಟಾ ಆಯ್ತು ಈಗ ಫೋನ್‌ – ಗೂಗಲ್‌ ಜೊತೆಗೂಡಿ ಓಎಸ್‌, ಕಡಿಮೆ ಬೆಲೆಗೆ ಬರಲಿದೆ ಗುಣಮಟ್ಟದ ಫೋನ್‌

Public TV
4 Min Read

ಮುಂಬೈ: ಕಡಿಮೆ ಬೆಲೆಗೆ ಡೇಟಾವನ್ನು ನೀಡಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದ್ದ ಜಿಯೋ ಈಗ ಕಡಿಮೆ ಬೆಲೆಯ ಫೋನಿಗಾಗಿ ಗೂಗಲ್‌ ಜೊತೆಗೂಡಿ ಆಂಡ್ರಾಯ್ಡ್‌ ಓಎಸ್‌ ಬಿಡುಗಡೆ ಮಾಡಲು ಮುಂದಾಗಿದೆ.

ಜಿಯೋವನ್ನು ವಿಶ್ವದರ್ಜೆಯ ಕಂಪನಿಯನ್ನಾಗಿ ಮಾಡಲು ಕನಸು ಕಾಣುತ್ತಿರುವ ಮುಕೇಶ್‌ ಅಂಬಾನಿ ಮೈಕ್ರೋಸಾಫ್ಟ್‌, ಫೇಸ್‌ಬುಕ್‌ ಬಳಿಕ ಈಗ ಗೂಗಲ್‌ ಕಂಪನಿಗೂ ಹೂಡಿಕೆಗೆ ಅನುಮತಿ ನೀಡಿದ್ದಾರೆ. ಗೂಗಲ್‌ ಕಂಪನಿ ಜಿಯೋದಲ್ಲಿ 33,737 ಕೋಟಿ ರೂ. ಹಣವನ್ನು ಹೂಡಿಕೆ ಮಾಡಲಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ 43ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಕೇಶ್‌ ಅಂಬಾನಿ, ದೇಶದ ಪ್ರತಿಯೊಬ್ಬ ಪ್ರಜೆ ಸ್ಮಾರ್ಟ್‌ ಸಾಧನವನ್ನು ಬಳಸುವಂತಾಗಲು ನಾವು ಕಡಿಮೆ ಬೆಲೆಯಲ್ಲಿ ಗೂಗಲ್‌ ಜೊತೆಗೂಡಿ ಆಂಡ್ರಾಯ್ಡ್‌ ಫೋನ್‌ ನಿರ್ಮಾಣ ಮಾಡುತ್ತೇವೆ. ಈ ವೇಳೆ ಭಾರತವನ್ನು 2ಜಿ ಮುಕ್ತ ಮಾಡಿ ಕಡಿಮೆ ಬೆಲೆಯಲ್ಲಿ 4ಜಿ ಅಥವಾ 5ಜಿ ಆಂಡ್ರಾಯ್ಡ್‌ ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು.

ಜಿಯೋ ಹೂಡಿಕೆಯ ಬಗ್ಗೆ ತನ್ನ ಬ್ಗಾಗ್‌ನಲ್ಲಿ ಬರೆದಿರುವ ಗೂಗಲ್‌ ಭಾರತದಲ್ಲಿ ಮುಂದಿನ 5-7 ವರ್ಷದ ಒಳಗಡೆ 10 ಶತಕೋಟಿ ಡಾಲರ್‌(75 ಸಾವಿರ ಕೋಟಿ ರೂ.) ಹಣವನ್ನು ಹೂಡಿಕೆ ಮಾಡುವ ಭಾಗವಾಗಿ ಜಿಯೋ ಕಂಪನಿಯಲ್ಲಿ 33,737 ಕೋಟಿ ರೂ.(4.5 ಶತಕೋಟಿ ಡಾಲರ್)‌ ಹಣವನ್ನು ಹೂಡಿಕೆ ಮಾಡುತ್ತಿರುವಾಗಿ ತಿಳಿಸಿದೆ.

ಭಾರತದಲ್ಲಿ ಈಗಲೂ ಬಹಳಷ್ಟು ಜನ ಇಂಟರ್‌ನೆಟ್‌ ಸೌಲಭ್ಯದಿಂದ ವಂಚಿತರಾಗಿದ್ದು, ಕೆಲವೇ ಮಂದಿ ಬಳಿ ಸ್ಮಾರ್ಟ್‌ಫೋನ್‌ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಎರಡೂ ಕಂಪನಿಗಳು ಜೊತೆಗೂಡಿ ಕಡಿಮೆ ಬೆಲೆಯಲ್ಲಿ ಎಂಟ್ರಿ ಲೆವೆಲ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಗೂಗಲ್‌ ಹೇಳಿದೆ.

ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಅನ್ನು ಭಾರತೀಯರು ಸ್ವೀಕರಿಸಿದ್ದು ನಮಗೆ ಬಹಳ ಸಂತಸವಾಗಿದೆ. ಹೀಗಾಗಿ ಆಂಡ್ರಾಯ್ಡ್‌ ಓಸ್‌ ಜನಪ್ರಿಯಗೊಳಿಸಲು ನಾವು ಆಯಾ ದೇಶದ ಕಂಪನಿಗಳ ಜೊತೆ ಸಹಯೋಗದಲ್ಲಿ ಕೆಲಸ ಮಾಡುತ್ತೇವೆ. ಈ ಯೋಜನೆಯ ಭಾಗವಾಗಿ ಜಿಯೋದ ಜೊತೆ ಮೊದಲ ಹೆಜ್ಜೆ ಇಡುತ್ತಿದ್ದೇವೆ ಎಂದು ತಿಳಿಸಿದೆ.

ಕಡಿಮೆ ಬೆಲೆಯಲ್ಲಿ ಹೇಗೆ?
ಜಿಯೋ ಜೊತೆಗೂಡಿ ನಿರ್ಮಾಣವಾಗಲಿರುವ ಆಂಡ್ರಾಯ್ಡ್‌ ಓಸ್ ಹೇಗೆ ಭಿನ್ನ. ಈಗ ಇರುವುದಕ್ಕಿಂತ ಕಡಿಮೆ ಬೆಲೆಯಲ್ಲಿ ಹೇಗೆ ಸಿಗಲಿದೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಪ್ರಕಟವಾಲಿದೆ. ಜಿಯೋದಲ್ಲಿ ಈಗಾಗಲೇ ಚಿಪ್‌ ತಯಾರಕ ಕಂಪನಿಗಳಾದ ಕ್ವಾಲಕಂ ಮತ್ತು ಇಂಟೆಲ್‌ ಹೂಡಿಕೆ ಮಾಡಿದೆ. ಹೀಗಾಗಿ ಹಾರ್ಡ್‌ವೇರ್‌ ವಿಚಾರದಲ್ಲಿ ಫೋನ್‌ ತಯಾರಿಕೆಗೆ ಈ ಹೂಡಿಕೆ ನೆರವಾಗಬಹುದು. ಆಪರೇಟಿಂಗ್‌ ಸಿಸ್ಟಂ ವಿಚಾರದಲ್ಲಿ ಗೂಗಲ್‌ ಹೇಗೂ ಸಹಾಯ ಮಾಡುತ್ತದೆ ಎಂದು ಈಗಾಗಲೇ ಹೇಳಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಡೇಟಾ ಕ್ರಾಂತಿ ಮಾಡಿದಂತೆ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಜಿಯೋ ಕ್ರಾಂತಿ ಮಾಡುತ್ತಾ ಎಂಬ ಪ್ರಶ್ನೆ ಮೂಡಿದೆ.

ಕಡಿಮೆ ಬೆಲೆಯಲ್ಲಿ ಆಂಡಾಯ್ಡ್‌ ಫೋನ್‌ಗಳನ್ನು ಬಿಡುಗಡೆ ಮಾಡುವ ಸಂಬಂಧ ಗೂಗಲ್‌ ಸ್ಮಾರ್ಟ್‌ಫೋನ್‌ ತಯಾರಕಾ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದು ಹೊಸದೆನಲ್ಲ. ಈ ಹಿಂದೆ 2014ರಲ್ಲಿ ಆಂಡ್ರಾಯ್ಡ್‌  ಒನ್‌ ಓಎಸ್‌  ಬಿಡುಗಡೆ ಮಾಡಿತ್ತು. ಮೈಕ್ರೋಮ್ಯಾಕ್ಸ್‌, ಕಾರ್ಬನ್‌, ಲಾವಾ, ಸ್ಫೈಸ್‌, ಕ್ಸಿಯೋಮಿ, ನೋಕಿಯಾ ಕಂಪನಿಗಳು  ಈ ಓಎಸ್‌ ಅಡಿಯಲ್ಲಿ ಫೋನ್‌  ಬಿಡುಗಡೆ ಮಾಡಿತ್ತು.

ಸ್ಟಾಕ್‌ ಆಂಡ್ರಾಯ್ಡ್‌ (ಶುದ್ಧವಾದ ಆಂಡ್ರಾಯ್ಡ್‌ ಓಸ್‌. ಸ್ಟಾಕ್‌ ಆಂಡ್ರಾಯ್ಡ್‌ ಇದ್ದಲ್ಲಿ ಗೂಗಲ್‌ ಅಪ್‌ಡೇಟ್‌ ಮಾಡಿದ ಕೂಡಲೇ ಓಎಸ್‌ ಅಪ್‌ಡೇಟ್‌ ಸಿಗುತ್ತದೆ. ಕಸ್ಟಮಸ್ಡ್‌ ಆಂಡ್ರಾಯ್ಡ್‌ ಓಎಸ್‌ ಆದ್ರೆ ಕಂಪನಿಗಳು ಅಪ್‌ಡೇಟ್‌ ನೀಡಬೇಕಾಗುತ್ತದೆ) ಆಗಿದ್ದ ಕಾರಣ ಫೋನ್‌ಗಳು ಮಾರುಕಟ್ಟೆಯಲ್ಲಿ ಕ್ಲಿಕ್‌ ಆಗಿತ್ತು.

ಇದಾದ ಬಳಿಕ 2019ರಲ್ಲಿ ಗೂಗಲ್‌ ಕಡಿಮೆ ಬೆಲೆಯಲ್ಲಿ ಫೋನ್‌ ಬಿಡುಗಡೆ ಮಾಡಲು ಆಂಡ್ರಾಯ್ಡ್‌ ಗೋ ಹೆಸರಿನ ಓಎಸ್‌ ಬಿಡುಗಡೆ ಮಾಡಿತ್ತು. ಆಂಡ್ರಾಯ್ಡ್ ಗೋ ಎಂಬುದು ಅತ್ಯಂತ ಲಘುವಾದ ಆಂಡ್ರಾಯ್ಡ್ ಆವೃತ್ತಿ. ಕಡಿಮೆ ಮೆಮೊರಿ, ವೈಶಿಷ್ಟ್ಯಗಳೂ ಸೀಮಿತ ಮತ್ತು ಅದರ ಕಾರ್ಯಾಚರಣೆಗೆ ಕಡಿಮೆ ರ‍್ಯಾಮ್ ಸಾಕಾಗಿತ್ತು. ಈ ಆಪರೇಟಿಂಗ್‌ ಸಿಸ್ಟಂಗೆ 2 ಜಿಬಿ ರ‍್ಯಾಮ್ ಅಥವಾ ಅದಕ್ಕಿಂತ ಕಡಿಮೆ ಗಾತ್ರದ ರ‍್ಯಾಮ್ ಇರುವ ಫೋನ್‌ ಸಾಕಾಗಿತ್ತು.

ಜಿಯೋದಲ್ಲಿ ಯಾರ ಹೂಡಿಕೆ ಎಷ್ಟಿದೆ?
ಫೇಸ್‌ಬುಕ್‌ – 43,574.62 ಕೋಟಿ ರೂ.(ಶೇ.9.99)
ಸಿಲ್ವರ್‌ ಲೇಕ್‌ ಪಾರ್ಟ್‌ನರ್ಸ್‌ 5,655.75 ಕೋಟಿ ರೂ.(ಶೇ.1.15)
ವಿಸ್ತಾ ಇಕ್ವಿಟಿ ಪಾರ್ಟ್‌ನರ್ಸ್‌ 11,367 ಕೋಟಿ ರೂ.(ಶೇ.2.32)
ಜನರಲ್‌ ಅಟ್ಲಾಂಟಿಕ್‌ – 6,598.38 ಕೋಟಿ ರೂ.(ಶೇ.1.34)
ಕೆಕೆಆರ್‌ – 11,367 ಕೋಟಿ ರೂ.(ಶೇ.2.32)
ಮುಬಡಾಲ – 9,093.60 ಕೋಟಿ ರೂ.(ಶೇ.1.85)


ಸಿಲ್ವರ್‌ ಲೇಕ್‌ ಪಾರ್ಟನರ್‌ ಮತ್ತಷ್ಟು ಹೂಡಿಕೆ – 4,546.80 ಕೋಟಿ ರೂ. (ಶೇ.0.93)
ಅಬುಧಾಬಿ ಇನ್ವೆಸ್ಟ್‌ಮೆಂಟ್‌ ಅಥಾರಿಟಿ – 5,683.50 ಕೋಟಿ ರೂ.(ಶೇ.1.16 )
ಟಿಪಿಜಿ – 4,546.8 ಕೋಟಿ ರೂ.(ಶೇ.93)
ಎಲ್‌ ಕಟ್ಟರ್‌ಟನ್‌ – 1,894 ಕೋಟಿ ರೂ.(ಶೇ.0.39)
ಪಿಐಎಫ್‌ – 11,367 ಕೋಟಿ ರೂ.(ಶೇ.2.32)
ಇಂಟೆಲ್‌ – 1,894.5 ಕೋಟಿ ರೂ.(ಶೇ.0.39)
ಕ್ವಾಲಕಂ – 730 ಕೋಟಿ ರೂ.(ಶೇ.0.15)
ಗೂಗಲ್‌ – 33,737 ಕೋಟಿ ರೂ.(ಶೇ.7.7)

ಜಿಯೋವನ್ನು ಬಹುರಾಷ್ಟ್ರೀಯ ಡಿಜಿಟಲ್‌ ಕಂಪನಿಯಾಗಿ ರೂಪಿಸಲು ಮುಕೇಶ್‌ ಅಂಬಾನಿ ಪ್ಲ್ಯಾನ್‌ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಮೆರಿಕದ ಷೇರು ಮಾರುಕಟ್ಟೆ ನಾಸ್ಡಾಕ್‌ನಲ್ಲೂ ಜಿಯೋ ಕಂಪನಿ ಲಿಸ್ಟ್‌ ಆಗುವ ಸಾಧ್ಯತೆಯಿದೆ. ಮುಂದೆ ಭಾರತದಲ್ಲಿ 5ಜಿ ನೆಟ್‌ವರ್ಕ್‌ ಬರಲಿರುವ ಹಿನ್ನೆಲೆಯಲ್ಲಿ ಈ ವಾರವೇ ಅಮೆರಿಕದ ಚಿಪ್‌ ತಯಾರಕಾ ಕ್ವಾಲಕಂ ಕಂಪನಿ ಜಿಯೋದಲ್ಲಿ 730 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿತ್ತು.

ಭಾರತದ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯಲ್ಲಿ ಶೇ.90 ರಷ್ಟು ಆಂಡ್ರಾಯ್ಡ್‌ ಬಳಕೆದಾರರಿದ್ದಾರೆ. ಹೀಗಾಗಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಫೋನ್‌ ಮಾರುಕಟ್ಟೆಯಾದ ಭಾರತದಲ್ಲಿ ಹೂಡಿಕೆ ಮಾಡಲು ಗೂಗಲ್‌ ಮುಂದಾಗುತ್ತಿದೆ. ಭಾರತದಲ್ಲಿ ಜಿಯೋಗೆ ಈಗಾಗಲೇ 40 ಕೋಟಿ ಗ್ರಾಹಕರು(ಶೇ.32.5 ರಷ್ಟು) ಇದ್ದಾರೆ. ಕಂಪನಿಯ ಬೆಳವಣಿಗೆ ದರ ಗಮನಿಸಿದರೆ 2025ರ ವೇಳೆಗೆ ಭಾರತ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ.48ರಷ್ಟು ಪಾಲನ್ನು ಹೊಂದಬಹುದದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *