ಡೇಂಜರಸ್ ಬೀಮರ್- ಸೈನಿಯಿಂದ ಸಾರಿ ಹೇಳಿಸಿದ ಪಂತ್

Public TV
2 Min Read

ದುಬೈ: ಐಪಿಎಲ್ 2020ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನವದೀಪ್ ಸೈನಿ ತಮ್ಮ ವೇಗ ಬೌಲಿಂಗ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಗಂಟೆಗೆ 147 ಕಿಮೀ ವೇಗದಲ್ಲಿ ಬೌಲ್ ಮಾಡುತ್ತಿರುವ ಸೈನಿ ಟೂರ್ನಿಯ ಫಾಸ್ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಆದರೆ ಪ್ರತಿ ಪಂದ್ಯದಲ್ಲಿ ಯಾರ್ಕರ್ ಎಸೆಯುವ ಸಂದರ್ಭದಲ್ಲಿ ಬೀಮರ್ ಎಸೆಯುವ ಮೂಲಕ ಸೈನಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಸೈನಿ ಡೇಂಜರಸ್ ಬೀಮರ್ ಎಸೆಯುವ ಮೂಲಕ ಎದುರಾಳಿ ತಂಡದ ಆಟಗಾರರು ಗರಂ ಆಗಲು ಕಾರಣರಾಗಿದ್ದರು. ಇನ್ನಿಂಗ್ಸ್ ನ 15ನೇ ಓವರ್ ಎಸೆತ ಸೈನಿ ಐದನೇ ಎಸೆತವನ್ನು ಫುಲ್ ಟಾಸ್ ರೂಪದಲ್ಲಿ ಬೀಮರ್ ಎಸೆದಿದ್ದರು. ಇದನ್ನು ಆನ್‍ಫೀಲ್ಡ್ ಅಂಪೈರ್ ನೋಬಾಲ್ ಎಂದು ಪ್ರಕಟಿಸಿದ್ದರು.

ಸ್ಟ್ರೈಕ್‍ನಲ್ಲಿದ್ದ ಸ್ಟೋಯ್ನಿಸ್ ಸೋಂಟದ ಭಾಗಗಿಂತಲೂ ಎತ್ತರದಲ್ಲಿ ಬಂದ ಚೆಂಡನ್ನು ಎದುರಿಸುವ ಬರದಲ್ಲಿ ಕೈಗೆ ತಾಗಿ ಗಾಯವಾಗಿತ್ತು. ಸಾಮಾನ್ಯವಾಗಿ ಯಾವುದೇ ಬೌಲರ್ ಬೀಮರ್ ಎಸೆದ ಸಂದರ್ಭದಲ್ಲಿ ಕೂಡಲೇ ಬ್ಯಾಟ್ಸ್ ಮನ್ ಬಳಿ ಕ್ಷಮೆ ಕೇಳುತ್ತಾರೆ. ಆದರೆ ಸೈನಿ ಘಟನೆ ನಡೆದ ಬಳಿಕ ಯಾವುದೇ ರೀತಿ ಕ್ಷಮೆ ಕೇಳಿರಲಿಲ್ಲ. ಕ್ರಿಕೆಟ್ ವಿಶ್ಲೇಷಣೆ ನೀಡುತ್ತಿದ್ದ ವೀಕ್ಷಕ ವಿವರಣೆಗಾರ ಕೂಡ ಸೈನಿ ನಡೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು.

ಸೈನಿ ನಡೆಯ ವಿರುದ್ಧ ಸೋಯ್ನಿಸ್ ಹಾಗೂ ನಾನ್‍ಸ್ಟ್ರೈಕ್‍ನಲ್ಲಿದ್ದ ಪಂತ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಓವರ್ ಮುಕ್ತಾಯದ ಬಳಿಕ ಪಂತ್, ಸ್ಟೋಯ್ನಿಸ್ ಬಳಿ ಕ್ಷಮೆ ಕೇಳುವಂತೆ ಸೈನಿಗೆ ಸೂಚಿಸಿದ್ದರು. ಈ ವೇಳೆ ಕೊನೆಗೂ ಸೈನಿ ಕ್ಷಮೆ ಕೋರಿದ್ದರು. ಇನ್ನಿಂಗ್ಸ್ ನ 17ನೇ ಓವರ್ ಬೌಲ್ ಮಾಡಲು ಮತ್ತೆ ಆಗಮಿಸಿದ ಸೈನಿ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದ ಪಂತ್, ಸ್ಟೋಯ್ನಿಸ್ 18 ರನ್ ಸಿಡಿಸಿ ತಿರುಗೇಟು ನೀಡಿದ್ದರು. ಉಳಿದಂತೆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 59 ರನ್ ಗೆಲುವು ಪಡೆದಿತ್ತು.

ಇದಕ್ಕೂ ಮುನ್ನ ಸೈನಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಬೀಮರ್ ಎಸೆದಿದ್ದರು. ಸೈನಿ ಬೀಮರ್ ಎದುರಿಸಿದ್ದ ಆಲ್‍ರೌಂಡರ್ ರಾಹುಲ್ ತೆವಾಟಿಯಾ ಕುಸಿದು ಬಿದಿದ್ದರು. ಆದರೆ ಅಂದು ಯಾವುದೇ ಪ್ರಮಾದ ನಡೆದಿರಲಿಲ್ಲ. ಇದರ ಬೆನಲ್ಲೇ ಮತ್ತೆ ಸೈನಿ ಬೀಮರ್ ಎಸೆದಿರುವುದು ಸಾಕಷ್ಟು ಮಂದಿಗೆ ಅಚ್ಚರಿ ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *