ಡೆಲ್ಲಿ ತಂಡಕ್ಕೆ ನೆರವಾಯ್ತು ಅಂಪೈರ್ ಎಡವಟ್ಟು ತೀರ್ಪು- ಶ್ರೀನಾಥ್‍ಗೆ ದೂರು ಕೊಟ್ಟ ಪಂಜಾಬ್

Public TV
3 Min Read

ಅಬುಧಾಬಿ: ಕಿಂಗ್ಸ್ ಇಲೆವೆನ್ ತಂಡ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರ ವಿವಾದಾತ್ಮಕ ಶಾರ್ಟ್ ರನ್ ವಿರುದ್ಧ ಪಂಜಾಬ್ ತಂಡ ಮನವಿ ಮಾಡಿದ್ದು, ಉತ್ತಮ ಫಲಿತಾಂಶಕ್ಕಾಗಿ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲು ಆಟಗಾರರು ಮನವಿ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಿಇಒ ಸತೀಶ್ ಮೆನನ್, ಪಂದ್ಯದ ರೆಫರಿ ಜಾವಗಲ್ ಶ್ರೀನಾಥ್ ಬಳಿ ಮನವಿ ಮಾಡಿದ್ದೇವೆ. ಮಾನವ ತಪ್ಪು ಸಹಜವಾಗಿ ನಡೆಯುತ್ತದೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ, ತಂತ್ರಜ್ಞಾನ ಲಭ್ಯವಿದ್ದರೂ ಇಂತಹ ಪ್ರಮಾದ ನಡೆಯುವುದು ಸರಿಯಲ್ಲ. ಈ ಒಂದು ರನ್ ನಮ್ಮ ಪ್ಲೇ ಆಫ್ ಪ್ರವೇಶಿಸಲು ದುಬಾರಿಯಾಗಬಹುದು. ಸೋಲು ಅಂತಿಮವಾಗಿ ಸೋಲು ಅಷ್ಟೇ. ಆದ್ದರಿಂದ ನಿಯಮಗಳಲ್ಲಿ ಬದಲಾವಣೆ ತರುವ ವಿಶ್ವಾಸವಿದೆ ಎಂದು ತಿಳಿಸಿದರು.

ಇತ್ತ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಮಾಜಿ ಆಟಗಾರ ಟಾಮ್ ಮೂಡಿ, ತಂತ್ರಜ್ಞಾನ ಆಟಕ್ಕೆ ಸಹಾಯ ಮಾಡಬೇಕಾದರೆ ನಿಯಮಗಳ ಬದಲಾವಣೆ ಅಗತ್ಯವಿದೆ. ಆದರೆ ಯಾವುದೋ ಒಂದು ತಪ್ಪು ನಡೆಯುವವರೆಗೂ ಅಂತಹ ವಿಷಯಗಳನ್ನು ನಾವು ಯೋಚಿಸಲಾಗುವುದಿಲ್ಲ. ಘಟನೆಯಲ್ಲಿ ಮೂರನೇ ಅಂಪೈರ್ ತೀರ್ಪು ನೀಡಬೇಕಾಗಿತ್ತು. ಯಾವುದೇ ನಿಯಮಗಳನ್ನು ಬದಲಿಸಿದರೂ ಟೂರ್ನಿಯ ಆರಂಭದಲ್ಲೇ ಅದನ್ನು ಘೋಷಿಸಬೇಕಿದೆ ಎಂದು ಹೇಳಿದ್ದಾರೆ.

ಪಂಜಾಬ್ ಮತ್ತು ಡೆಲ್ಲಿ ವಿರುದ್ಧ ಪಂದ್ಯ ಸೂಪರ್ ಓವರ್ ಮುನ್ನ ಕಗಿಸೊ ರಬಡಾ ಬೌಲ್ ಮಾಡಿದ ಓವರಿನಲ್ಲಿ ನಾನ್‍ಸ್ಟ್ರೇಕ್ ನಲ್ಲಿದ್ದ ಕ್ರಿಸ್ ಜೋರ್ಡನ್ ರನ್ ಪೂರ್ಣಗೊಂಡಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ತಾಂತ್ರಿಕವಾಗಿ ಸಾಕ್ಷಿ ಇದ್ದರೂ ಅಂಪೈರ್ ಮೆನನ್ ತಮ್ಮ ತೀರ್ಪನ್ನು ಮರುಪರಿಶೀಲನೆ ಮಾಡಲಿಲ್ಲ. ಪರಿಣಾಮ ಕಿಂಗ್ಸ್ ಇಲೆವೆನ್ ಖಾತೆಗೆ ಕೇವಲ 1 ರನ್ ಲಭಿಸಿತ್ತು.

ಅಂತಿಮ ಓವರಿನಲ್ಲಿ ಪಂಜಾಬ್ 13 ರನ್ ಗಳಿಸಬೇಕಿತ್ತು. ಮಯಾಂಕ್ 12 ರನ್ ಸಿಡಿಸಲು ಯಶಸ್ವಿಯಾಗಿದ್ದರು. ಒಂದೊಮ್ಮೆ ಶಾರ್ಟ್ ರನ್ ಅವರ ಖಾತೆಗೆ ಜಮೆಯಾಗಿದ್ದರೆ ಮೂರು ಎಸೆತ ಬಾಕಿ ಇರುವಂತೆಯೇ ಪಂದ್ಯದಲ್ಲಿ ಪಂಜಾಬ್ ತಂಡ ಗೆಲುವು ಪಡೆಯುತ್ತಿತ್ತು. ಆದರೆ ಬಳಿಕ ನಡೆದ ಎರಡು ಎಸೆತಗಳಲ್ಲಿ, ಎರಡು ವಿಕೆಟ್ ಉರುಳಿದ ಕಾರಣ ಪಂದ್ಯದ ಫಲಿತಾಂಶ ತೀರ್ಮಾನ ಸೂಪರ್ ಓವರ್‍ನಲ್ಲೇ ಮಾಡಬೇಕಾಯ್ತು.

ಇತ್ತ ಶಾರ್ಟ್ ರನ್ ಕುರಿತಂತೆ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರ ಹಾಕಿರುವ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ, ಕೊರೊನಾ ಸಂದರ್ಭದಲ್ಲಿ ಐಪಿಎಲ್‍ಗಾಗಿ ಉತ್ಸಾಹದಿಂದ ಪ್ರಯಾಣಿಸಿದೆ. 6 ದಿನಗಳ ಕ್ವಾರಂಟೈನ್ ಹಾಗೂ 5 ಕೋವಿಡ್ ಟೆಸ್ಟ್‍ಗಳನ್ನ ನಗುವಿನ ಮೂಲಕವೇ ಎದುರಿಸಿದ್ದೆ. ಆದರೆ ಒಂದು ಶಾರ್ಟ್ ರನ್ ನನಗೆ ತೀವ್ರ ಹೊಡೆತ ನೀಡಿದೆ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಆಗದಿದ್ದರೆ ಅದರ ಅರ್ಥವೇನು? ಬಿಸಿಸಿಐಗೆ ಇದು ಹೊಸ ನಿಯಮಗಳನ್ನು ಪರಿಚಯಿಸಲು ಸೂಕ್ತ ಸಮಯ. ಇದು ಪ್ರತಿ ವರ್ಷ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಇತ್ತ ಕಿವೀಸ್ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ಪ್ರತಿಕ್ರಿಯೆ ನೀಡಿ, ಶಾರ್ಟ್ ರನ್ ಇಂದಿನ ಐಪಿಎಲ್ ಪಂದ್ಯದಲ್ಲಿ ಸಣ್ಣ ನಿರ್ಧಾರ. ಆದರೆ ನಿಮಗೆ ಕೊನೆಯ 2 ಎಸೆತಗಳಲ್ಲಿ 1 ರನ್ ಬೇಕಾಗಿದ್ದು, ಗೆಲುವು ಪಡೆಯಲು ಸಾಧ್ಯವಾಗದಿದ್ದರೆ ನಿಮ್ಮನ್ನು ನೀವೇ ದೂಷಿಸಿಕೊಳ್ಳಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *