ಡುಪ್ಲೆಸಿಸ್, ಗಾಯಕ್ವಾಡ್ ಶತಕದ ಜೊತೆಯಾಟ – ಚೆನ್ನೈಗೆ 7 ವಿಕೆಟ್‍ಗಳ ಭರ್ಜರಿ ಜಯ

Public TV
2 Min Read

– ಮೊದಲ ಸ್ಥಾನಕ್ಕೆ ಚೆನ್ನೈ, ಎರಡನೇ ಸ್ಥಾನಕ್ಕೆ ಕುಸಿದ ಬೆಂಗಳೂರು
– ಕೊನೆಯ ಸ್ಥಾನದಲ್ಲಿ ಹೈದರಬಾದ್

ಡೆಲ್ಲಿ: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮವಾಗಿ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ತಂಡದ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಗಳಿಸಿದೆ.

ಗೆಲ್ಲಲು 172ರನ್ ಗಳ ಗುರಿ ಪಡೆದ ಚೆನ್ನೈ ತಂಡ 18.3 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 173 ರನ್ ಸಿಡಸಿ ಗೆದ್ದು ಬೀಗಿತು. ಈ ಮೂಲಕ ಅಂಕ ಪಟ್ಟಿಯಲ್ಲಿ ಆರ್‍ಸಿಬಿಯನ್ನು ತಳ್ಳಿ ಮೊದಲ ಸ್ಥಾನಕ್ಕೆ ಏರಿದೆ. 6 ಪಂದ್ಯಗಳ ಪೈಕಿ 1ರಲ್ಲಿ ಗೆಲುವು ಸಾಧಿಸಿ 5 ಪಂದ್ಯಗಳನ್ನು ಸೋತ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ

ಶತಕದ ಜೊತೆಯಾಟ:
ಚೆನ್ನೈ ತಂಡದ ಆರಂಭಿಕ ಜೊಡಿಯಾದ ಫಾಫ್ ಡುಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ಶತಕದ ಜೊತೆಯಾಟ ವಾಡಿತು. ಋತುರಾಜ್ ಗಾಯಕ್ವಾಡ್ 75ರನ್ (44 ಎಸೆತ, 12 ಬೌಂಡರಿ) ಹೊಡೆದರೆ ಫಾಫ್ ಡು’ಫ್ಲೆಸಿಸ್ 56ರನ್ (38 ಎಸೆತ, 6 ಬೌಂಡರಿ, 1 ಸಿಕ್ಸರ್) ಬಾರಿಸಿದರು. ಈ ಜೋಡಿ ಮೊದಲ ವಿಕೆಟ್ ಗೆ 79 ಎಸೆತಗಳಲ್ಲಿ 129 ರನ್ ಜೊತೆಯಾಟವಾಡಿತು. ಅಂತಿಮವಾಗಿ ರವೀಂದ್ರ ಜಡೇಜಾ 7ರನ್ (6 ಬೌಂಡರಿ, 1 ಸಿಕ್ಸ್) ಸುರೇಶ್ ರೈನಾ 17 ರನ್(15 ಎಸೆತ, 3 ಬೌಂಡರಿ) ಸಿಡಿಸಿ ಗೆಲುವು ತಂದು ಕೊಟ್ಟರು.

ಟಾಸ್ ಗೆದ್ದ ಸನ್‍ರೈಸರ್ಸ್ ಹೈದಾರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರೆಸ್ಟೋವ್ ಜೋಡಿ ಬಿಗ್ ಓಪನಿಂಗ್ ನೋಡಲು ವಿಫಲವಾಯಿತು. ಬೈರೆಸ್ಟೋವ್ ಕೇವಲ 7 ರನ್(5 ಎಸೆತ, 1 ಬೌಂಡರಿ ಬಾರಿಸಿ) ಸ್ಯಾಮ್ ಕರ್ರನ್‍ಗೆ ವಿಕೆಟ್ ಒಪ್ಪಿಸಿದರು.

ವಾರ್ನರ್, ಮನೀಷ್ ಆಟ:
ನಂತರ ಬಂದ ಮನೀಶ್ ಪಾಂಡೆ ವಾರ್ನರ್ ಜೊತೆಗೂಡಿ ಭರ್ಜರಿ ಆಟವಾಡಿದರು. ಈ ಜೋಡಿ ಎರಡನೇ ವಿಕೆಟ್‍ಗೆ 87 ಎಸೆತಗಳಲ್ಲಿ 106 ರನ್ ಕಲೆಹಾಕಿ ಹೈದರಾಬಾದ್ ದೊಡ್ಡ ಮೊತ್ತ ಪೇರಿಸಲು ನೆರವಾದರು. ಉತ್ತಮವಾಗಿ ಅಡುತ್ತಿದ್ದ ಡೇವಿಡ್ ವಾರ್ನರ್ 57ರನ್(55 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಲುಂಗಿ ಎನ್‍ಗಿಡಿಗೆ ವಿಕೆಟ್ ಒಪ್ಪಿಸಿದರು. ಅವರ ಹಿಂದೆಯೇ ಮನೀಶ್ ಪಾಂಡೆ ಕೂಡ 61 ರನ್(46 ಎಸೆತ,5 ಬೌಂಡರಿ, 1 ಸಿಕ್ಸ್) ಸಿಡಿಸಿ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಫಾಫ್ ಡು’ಫ್ಲೆಸಿಸ್ ಹಿಡಿದ ಮನಮೋಹಕ ಕ್ಯಾಚ್‍ಗೆ ಬಲಿಯಾದರು.

ಕೇನ್ ವಿಲಿಯಮ್ಸನ್ ಸ್ಪೋಟಕ ಬ್ಯಾಟಿಂಗ್ ಮಾಡಿ 26ರನ್(10 ಎಸೆತ,4 ಬೌಂಡರಿ,1 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕೇದಾರ್ ಜಾಧವ್ 12 ರನ್(4 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 170 ಗಡಿ ದಾಟಿಸಿದರು. ಅಂತಿಮವಾಗಿ ನಿಗದಿತ ಓವರ್‍ ಗಳಲ್ಲಿ ಹೈದರಾಬಾದ್ ತಂಡ 3 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಚೆನ್ನೈ ಪರ ಲುಂಗಿ ಎನ್‍ಗಿಡಿ 2 ವಿಕೆಟ್ ಪಡೆದರೆ, ಇನ್ನೊಂದು ವಿಕೆಟ್ ಸ್ಯಾಮ್ ಕರ್ರನ್ ಪಾಲಾಯಿತು.

Share This Article
Leave a Comment

Leave a Reply

Your email address will not be published. Required fields are marked *