ಡಿಸೆಂಬರ್‌ನಲ್ಲಿ ಶಾಲೆ ತೆರೆಯೋದು ಸೂಕ್ತವಲ್ಲ- ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಶಿಫಾರಸು

Public TV
1 Min Read

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿಸೆಂಬರ್ ನಲ್ಲೂ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಭಾನುವಾರ (ನವೆಂಬರ್ 22) ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ಕುರಿತು ಚರ್ಚೆಯಾಗಿದೆ. ಈ ವೇಳೆ ಡಿಸೆಂಬರ್‍ನಲ್ಲಿ ಶಾಲೆ ತೆರೆಯುವುದು ಸೂಕ್ತವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರ ಸೂಚನೆ ಮೇರೆಗೆ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲೂ ಸೌಲಭ್ಯ ಹೆಚ್ಚಿಸಲಾಗಿದೆ. ಈಗ ಪ್ರತಿ ದಿನ ಸರಾಸರಿ 1,700 ರಷ್ಟು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಎಂಟು ತಿಂಗಳಲ್ಲಿ ಕೈಗೊಂಡ ನಾನಾ ಕ್ರಮಗಳ ಪರಿಣಾಮವಾಗಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ದೆಹಲಿ, ಹರಿಯಾಣ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಸೋಂಕು ಹರಡುವಿಕೆ ವೇಗ ಪಡೆದಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ.

ಚಳಿಗಾಲವೂ ಇರುವುದರಿಂದ ಕೋವಿಡ್ ಸೋಂಕು ಹರಡುವಿಕೆ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ತೀವ್ರವಾಗಿ ಬಾಧಿಸುತ್ತದೆ. ಸೆಪ್ಟೆಂಬರ್ ನಲ್ಲಿ ನಡೆದ ಸರ್ವೆ ಪ್ರಕಾರ, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಅಭಿಪ್ರಾಯವನ್ನೇ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಕೋವಿಡ್ ಪರಿಸ್ಥಿತಿ ನೋಡಿಕೊಂಡು ಶಾಲೆಗಳನ್ನು ತೆರೆಯಲು ಮತ್ತೆ ನಿರ್ಧಾರ ಕೈಗೊಳ್ಳಬಹುದು ಎಂದು ಸಭೆಯಲ್ಲಿ ಅಭಿಪ್ರಾಯ ಪಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *