ಡಿಸಿಎಂ ಸವದಿ ಜೊತೆ ಆಹಾರ ಧಾನ್ಯ ವಿತರಿಸಿದ ಸಚಿವ ಸೋಮಣ್ಣ

Public TV
2 Min Read

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ವಾರ್ಡಿನ ಚಂದ್ರ ಬಡಾವಣೆಯಲ್ಲಿ ನೂತನವಾಗಿ ಮಂಜೂರಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಉಪ ಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದ ಸಚಿವರು, ಈಗಾಗಲೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾರುತಿ ಮಂದಿರ ವಾರ್ಡ್ ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ನಿರ್ಮಿಸಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಯುನಾನಿ ಕಾಲೇಜಿನಲ್ಲಿ 200 ಹಾಸಿಗೆಗಳ ಹೈಟೆಕ್ ಸೆಂಟರನ್ನು ಸ್ಥಾಪಿಸಲಾಗಿದೆ. ಎಂ.ಸಿ. ಲೇಔಟ್ ಜೈಮುನಿರಾವ್ ವೃತ್ತದಲ್ಲಿ 200 ಹಾಸಿಗೆಗಳ ಆಸ್ಪತ್ರೆ ಸಜ್ಜುಗೊಳ್ಳುತ್ತಿದೆ. ಮಾರೇನಹಳ್ಳಿ ಬಳಿ 70 ಹಾಸಿಗೆಗಳ ಆಸ್ಪತ್ರೆ ಕೆಲವೇ ದಿನದಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರಲ್ಲದೆ, ಗೋವಿಂದರಾಜನಗರ ರೆಫರಲ್ ಆಸ್ಪತ್ರೆ ಈ ಭಾಗದ ಬಡ ಜನರ ಸೇವೆಯಲ್ಲಿ ನಿರತವಾಗಿದೆ ಎಂದು ತಿಳಿಸಿದರು.

ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ಧವಾಗಿದ್ದೇವೆ ಎಂದು ಹೇಳಿದ ಸಚಿವ ಸೋಮಣ್ಣನವರು ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಇಂದಿನಿಂದ ಗೋವಿಂದರಾಜನಗರ ಕ್ಷೇತ್ರದಲ್ಲಿ ಪ್ರತಿ ನಿತ್ಯ 18 ವಯಸ್ಸಿನ ನಂತರದ 4000 ಮಂದಿಗೆ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಸಚಿವ ಸೋಮಣ್ಣನವರು ಉಪ ಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ನಾಗರಬಾವಿ ವಾರ್ಡಿನ ಚಂದ್ರ ಬಡಾವಣೆಯಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.

ನಾಗರಬಾವಿ ವೃತ್ತದಲ್ಲಿ ಉಪ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ ಸಂಕಷ್ಟಕ್ಕೆ ಒಳಗಾದ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರಧಾನ್ಯ ಕಿಟ್ ಗಳನ್ನು ವಿತರಿಸಿದರು. ದೇಶದ 80 ಕೋಟಿ ಜನರಿಗೆ ಪ್ರಧಾನಮಂತ್ರಿ ಮೋದಿ ಅವರು ಉಚಿತ ಆಹಾರಧಾನ್ಯಗಳನ್ನು ವಿತರಿಸಲು ಆದೇಶ ನೀಡಿದ್ದಾರೆ. ಇದರೊಂದಿಗೆ ರಾಜ್ಯದ ಮುಖ್ಯಮಂತ್ರಿಗಳು ಬಡವರಿಗೆ ಉಪಯುಕ್ತವಾಗುವ ಹಲವಾರು ಪ್ಯಾಕೇಜುಗಳನ್ನು ಘೋಷಿಸಿದ್ದಾರೆ, ತಾವೂ ಸಹ ಈ ಕ್ಷೇತ್ರದ ಬಡ ಜನರಿಗೆ ಉತ್ತಮ ಗುಣಮಟ್ಟದ ಆಹಾರಧಾನ್ಯ ವಿತರಣೆ ಮಾಡುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಮುಂದುವರೆಯುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ, ಯುವಮುಖಂಡ ಡಾ.ಅರುಣ್ ಸೋಮಣ್ಣ, ಮಂಡಲಾಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಉಮೇಶ್ ಶೆಟ್ಟಿ, ದಾಸೇಗೌಡ, ವಾಗೀಶ್, ಮೋಹನ್ ಕುಮಾರ್, ಡಾ.ರಾಜು, ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *