ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ಐಟಿಸಿಎ ಫೆಲೋಶಿಪ್

Public TV
1 Min Read

– ಸರಕಾರಿ ಶಾಲೆಗಳಲ್ಲೂ ಉಪಗ್ರಹ ತಯಾರಿಕೆಗೆ ಡಿಸಿಎಂ ಆಸಕ್ತಿ

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಐಟಿಸಿಎ (ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್) ಗೌರವ ಫೆಲೋಶಿಪ್ ಅನ್ನು ಮಂಗಳವಾರ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.

ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ಉಪಗ್ರಹ, ಯುನಿಟಿಸ್ಯಾಟ್  ಸಕ್ಸಸ್ ಮೀಟ್‍ನಲ್ಲಿ ಡಿಸಿಎಂ ಅವರಿಗೆ ಈ ಫೆಲೋಶಿಪ್ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು; “ಸರಕಾರಿ ಶಾಲಾ ವಿದ್ಯಾರ್ಥಿಗಳಲ್ಲೂ ಉಪಗ್ರಹ ತಯಾರಿಕೆಯನ್ನು ಉತ್ತೇಜಿಸಲು ಉತ್ಸುಕರಾಗಿದ್ದೇವೆ ಮತ್ತು ಅದಕ್ಕೆ ಅಗತ್ಯವಾದ ಬೆಂಬಲ ನೀಡಲಾಗುವುದು” ಎಂದರು.

ಪ್ರಸ್ತುತ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿ ಉಪಗ್ರಹ ತಯಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಸರ್ಕಾರಿ ಶಾಲೆಗಳ ಮಟ್ಟದಲ್ಲಿಯೇ ಈ ರೀತಿಯ ಯೋಜನೆಯನ್ನು ಪ್ರಾರಂಭಿಸಲು ಐಟಿಸಿಎ ಮುಂದೆ ಬಂದರೆ, ಸರ್ಕಾರ ಎಲ್ಲ ಬೆಂಬಲವನ್ನು ನೀಡುತ್ತದೆ ಎಂದು ಡಿಸಿಎಂ ಭರವಸೆ ನೀಡಿದರು.

ನಾವಿನ್ಯತೆ ಮತ್ತು ಹೊಸತನವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರಕಾರವು ವಿದ್ಯಾರ್ಥಿ ಉಪಗ್ರಹ ಯೋಜನೆಗಳಿಗೆ ಯಾವಾಗಲೂ ಉತ್ತೇಜನ ನೀಡುತ್ತದೆ. ಇಸ್ರೇಲ್ ಶಾಲೆಗಳು ವಿದ್ಯಾರ್ಥಿಗಳ ಉಪಗ್ರಹ ಯೋಜನೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತವೆ. ಅದೇ ರೀತಿ ರಾಜ್ಯದಲ್ಲೂ ವಿದ್ಯಾರ್ಥಿಗಳ ಉಪಗ್ರಹ ಯೋಜನೆಗಳನ್ನು ಪ್ರೋತ್ಸಾಹಿಸಲು ಸರಕಾರ ಉದ್ದೇಶಿಸಿದೆ. ಸ್ಥಳೀಯ ತಂತ್ರಜ್ಞಾನ ಮತ್ತು ಇತರ ಪೂರಕ ಅಂಶಗಳಿಂದಾಗಿ ಉಪಗ್ರಹಗಳ ತಯಾರಿಕೆ ವೆಚ್ಚ ಕಡಿಮೆಯಾಗಿದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ತಯಾರಿಸಿ ಯಶಸ್ವಿಯಾಗಿ ಉಡಾವಣೆ ಮಾಡಿದ ಯುನಿಸ್ಯಾಟ್ (3-in-1 JITsat, GHRCEsat, SriShakthiSat) ತಂಡದಲ್ಲಿದ್ದ ಎಲ್ಲರನ್ನು ಡಿಸಿಎಂ ಗೌರವಿಸಿದರು.

ಐಟಿಸಿಎ ಅಧ್ಯಕ್ಷ ಡಾ. ಎಲ್.ವಿ. ಮಲ್ಲಿಕಾರ್ಜುನ ರೆಡ್ಡಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಆರ್.ಎಂ.ವಾಸಗಂ, ಡಾ.ಮೈಲ್‍ಸಾಮಿ ಅಣ್ಣಾದುರೈ, ಇಸ್ರೋ ಚಂದ್ರಯಾನ್ ಯೋಜನೆಯ ಮಾಜಿ ನಿರ್ದೇಶಕ ಗಣೇಶನ್ ನಂಜುಂಡಸ್ವಾಮಿ, ಶಿಕ್ಷಣ ತಜ್ಞ ಡಾ.ವೂಡೇ ಪಿ.ಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *