ಬೆಂಗಳೂರು: ಕಾಂಗ್ರೆಸ್ ಪಕ್ಷ ಸಂಘಟನೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಪ್ರಮುಖರಿಗಾಗಿ ಡಿನ್ನರ್ ಮೀಟಿಂಗ್ ಏರ್ಪಡಿಸಿದ್ದಾರೆ. ಬೆಂಗಳೂರಿನ ಎಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳನ್ನು ಡಿನ್ನರ್ ಮೀಟಿಂಗ್ ಗೆ ಕರೆದಿದ್ದಾರೆ. ಆದರೆ ತಮಗೆ ಅಸಮಾಧಾನ ಇರುವ ಇಬ್ಬರು ಶಾಸಕರಿಗೆ ಮಾತ್ರ ಪಕ್ಷದ ಮುಖಂಡರ ಮೂಲಕ ಕರೆ ಮಾಡಿಸಿ ರಿವೆಂಜ್ ಪಾಲಿಟಿಕ್ಸ್ ಗೆ ಮುಂದಾಗಿದ್ದಾರಾ ಎಂಬ ಮಾತುಗಳು ಹರಿದಾಡುತ್ತಿದೆ.
ಸಿದ್ದರಾಮಯ್ಯ ಆಪ್ತರಾಗಿರುವ ಇಬ್ಬರು ಶಾಸಕರಿಗೆ ಮಾತ್ರ ಪಕ್ಷದ ಜಿಲ್ಲಾಧ್ಯಕ್ಷರ ಮೂಲಕ ಕರೆ ಮಾಡಿದ್ದಾರೆ. ಜಮೀರ್ ಅಹಮ್ಮದ್ ಖಾನ್ ಹಾಗೂ ಅಖಂಡ ಶ್ರೀನಿವಾಸ್ ಮೂರ್ತಿಗೆ ನೇರವಾಗಿ ಕರೆ ಮಾಡದ ಡಿಕೆಶಿ ಅವರು, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮೂಲಕ ಕರೆ ಮಾಡಿಸಿ ಡಿನ್ನರ್ ಮೀಟಿಂಗ್‍ಗೆ ಆಹ್ವಾನ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಪಕ್ಷ ಸಂಘಟನೆ ಸಂಬಂಧ ತಮ್ಮ ಸದಾಶಿವ ನಗರ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವ್ಯವಸ್ಥೆ ಮಾಡಿರುವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಎಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ಕಳೆದ ಚುನಾವಣೆಯ ಬೆಂಗಳೂರಿನ ಪರಾಜಿತ ಅಭ್ಯರ್ಥಿಗಳು, ಪರಿಷತ್ ಸದಸ್ಯರು, ಸಂಸದರಿಗೆ ಸಭೆಗೆ ಆಹ್ವಾನ ನೀಡಿದ್ದಾರೆ. ಸಿದ್ದರಾಮಯ್ಯ ಸಹ ಇಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ – ಪಿಯುಸಿ ಬೋರ್ಡ್
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣಗಳಲ್ಲಿ ಡಿ.ಕೆ ಶಿವಕುಮಾರ್ ಅವರು ಸಂಪತ್ ರಾಜು ಪರ ವಹಿಸಿದ್ದರು. ಅಂದಿನಿಂದ ಡಿಕೆಶಿಯಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರನ್ನು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಕರೆ ಮಾಡಿಸಿ ತಮ್ಮ ನಿವಾಸಕ್ಕೆ ಭೋಜನ ಹಾಗೂ ಸಭೆಗೆ ಬರುವಂತೆ ಕರೆದಿದ್ದಾರೆ. ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆ ನೀಡಿ ಡಿಕೆಶಿ ಕೆಂಗಣ್ಣಿಗೆ ಗುರಿ ಆಗಿರುವ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರನ್ನು ಕೂಡ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಮೂಲಕ ಕರೆ ಮಾಡಿಸಿ ತಮ್ಮ ನಿವಾಸಕ್ಕೆ ಬರುವಂತೆ ಹೇಳಿದ್ದಾರೆ. ಇದನ್ನು ಡಿನ್ನರ್ ಪಾಲಿಟಿಕ್ಸ್ ನಡುವೆ ಡಿಕೆಶಿಯ ರಿವೆಂಜ್ ಪಾಲಿಟಿಕ್ಸ್ ಎನ್ನಲಾಗುತ್ತಿದೆ.