ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ಸರ್ಕಾರದಿಂದ ಅನುಮತಿ ನಿರಾಕರಣೆ

Public TV
2 Min Read

– ಕಾನೂನಿನ ಅಡಿಯಲ್ಲಿ ಕಾರ್ಯಕ್ರಮ ಮಾಡ್ತೀವಿ: ಸಿದ್ದರಾಮಯ್ಯ

ಬೆಂಗಳೂರು: ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೊರೊನಾ ಲಾಕ್‍ಡೌನ್ ಕಾರಣ ನೀಡಿ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ.

ಜೂನ್ 14ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ 150 ನಾಯಕರ ಸಮ್ಮುಖದಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದರು. ಈ ಕಾರ್ಯಕ್ರಮ ನಡೆಸಲು ರಾಜ್ಯ ಸರ್ಕಾರದ ಅನುಮತಿ ಕೇಳಿತ್ತು. ಡಿಕೆ ಶಿವಕುಮಾರ್ ಅವರೇ ಸಿಎಂ ಯಡಿಯೂರಪ್ಪನವರ ಬಳಿ ಅನುಮತಿ ಕೇಳಿದ್ದರು.

ಜೂನ್ 31ರವರೆಗೆ ಲಾಕ್‍ಡೌನ್ ಜಾರಿಯಲ್ಲಿರುವ ಕಾರಣ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ತಮ್ಮ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಈ ಮೊದಲು ಮೇ 31ಕ್ಕೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್ ನಿಯಮದಿಂದಾಗಿ ಜೂನ್ 7ಕ್ಕೆ ಮುಂದೂಡಲಾಗಿತ್ತು. ಈ ದಿನಾಂಕದಂದು ಅನುಮತಿ ಸಿಗದ ಕಾರಣ ಜೂನ್ 14ಕ್ಕೆ ಮುಂದೂಡಲಾಗಿತ್ತು.

ಕೆಪಿಸಿಸಿಯ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಮತ್ತೆ ಅನುಮತಿ ನಿರಾಕರಿಸಿರುವ ಸರ್ಕಾರದ ಕ್ರಮವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಈ ನಿರ್ದಾರ ರಾಜಕೀಯ ಪ್ರೇರಿತ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪದಗ್ರಹಣ ಸಮಾರಂಭಕ್ಕೆ ಎರಡನೇ ಬಾರಿ ಸರ್ಕಾರ ಅನುಮತಿ ನಿರಾಕರಿಸಿದೆ. ಇದು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಸರ್ಕಾರ ರಾಜಕೀಯ ದುರುದ್ದೇಶದಿಂದ ಈ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.

ದೇಶದ ಗೃಹ ಸಚಿವರಾದ ಅಮಿತ್ ಶಾ ಅವರು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ವರ್ಚುವಲ್ ಕಾರ್ಯಕ್ರಮ  ನಡೆಸುವಾಗ ಅನ್ವಯ ಆಗದ ನಿಯಮಗಳು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಅನ್ವಯ ಆಗುವುದೇ ಎಂದು ಸಿದ್ದರಾಮಯ್ಯ ಅವರು ಪ್ರಶಿಸಿದ್ದಾರೆ.

ಸರ್ಕಾರ ಕೂಡಲೇ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡಬೇಕು. ಸರ್ಕಾರ ಏನೇ ದಮನಕಾರಿ ಪ್ರವೃತ್ತಿ ತೋರಿಸಿದರೂ ನಾವು ಕಾರ್ಯಕ್ರಮ ಮಾಡುತ್ತೇವೆ. ನಾವು ಕಾನೂನು ಗೌರವಿಸುವವರೇ ಹೊರತು ಕಾನೂನು ಭಂಗ ಮಾಡುವವರಲ್ಲ. ಕಾನೂನಿನ ಅಡಿಯಲ್ಲೇ ನಾವು ಕಾರ್ಯಕ್ರಮ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

https://www.facebook.com/publictv/posts/4369546059729779

 

Share This Article
Leave a Comment

Leave a Reply

Your email address will not be published. Required fields are marked *