ಕೊಪ್ಪಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ನಾವು ಬಗ್ಗಿಸಲು ಹೊರಟಿಲ್ಲ, ಸಿಬಿಐ ಅವರನ್ನು ಬಗ್ಗಿಸುತ್ತಿದೆ. ಇದಕ್ಕೆ ಬಿಜೆಪಿ ಹೊಣೆಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ಬೆದರಿಕೆಗೆ ಬಗ್ಗುವುದಿಲ್ಲ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು. ಸಿಬಿಐ, ಐಟಿ ತನಿಖೆಯಲ್ಲಿ ಹವಾಲಾ ಹಣ ಸಿಕ್ಕಿತು. ಕಪ್ಪು ಹಣ ಸಿಕ್ಕಿದ್ದರಿಂದಲೇ ಜೈಲಿಗೆ ಹೋಗಿ ಬಂದರು. ಇಷ್ಟೆಲ್ಲ ಆದರೂ ಬುದ್ಧಿ ಬಂದಿಲ್ಲ. ನಾವು ಏನೂ ಮಾಡಿಲ್ಲ, ಎಲ್ಲ ಸಿಬಿಐ ಮಾಡಿದೆ. ಸಿಬಿಐನವರು ಏನು ದಾಖಲೆ ಕೇಳುತ್ತಾರೋ ಕೊಡಲಿ, ಸೀತೆಯಷ್ಟೇ ಪವಿತ್ರವಾಗಿ ಹೊರಬರಲಿ ಎಂದು ಹರಿಹಾಯ್ದರು.
ಶಾಲೆ ಆರಂಭದ ಗೊಂದಲದ ಬಗ್ಗೆ ಮಾತನಾಡಿದ ಅವರು, ಸದ್ಯಕ್ಕೆ ಶಾಲೆಯನ್ನು ಆರಂಭ ಮಾಡುವುದಿಲ್ಲ. ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು. ವಿಧಾನ ಪರಿಷತ್ ಮತ್ತು ಉಪ ಚುನಾವಣೆ ಬಗ್ಗೆ ಮಾತನಾಡಿದ ಈಶ್ವರಪ್ಪ, ಚುನಾವಣೆ ಎಂದರೆ ಬಿಜೆಪಿ ಎನ್ನುವಂತಾಗಿದೆ. ಯಾವುದೇ ಚುನಾವಣೆ ಬರಲಿ ಬಿಜೆಪಿ ಗೆಲುವು ನಿಶ್ಚಿತ, ಈಗಾಗಲೆ ಲೋಕಸಭಾ ಚುನಾವಣೆ ಇದಕ್ಕೆ ಉತ್ತರ ಕೊಟ್ಟಿದೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಹೈ ಕಮಾಂಡ್‍ಗೆ ಕಳುಹಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.