ಡಿಕೆಶಿಯ ದೊಡ್ಡ ಆಲಹಳ್ಳಿಯ ನಿವಾಸದಲ್ಲಿ ಸಿಕ್ಕಿದ್ದು ಬರೀ 1 ರೂ. ನಾಣ್ಯಗಳು ಮಾತ್ರ!

Public TV
2 Min Read

ರಾಮನಗರ: ಡಿಕೆ ಬ್ರದರ್ಸ್ ಮನೆಗಳ ಮೇಲೆ ಸಿಬಿಐ ದಾಳಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರದ ದೊಡ್ಡ ಆಲಹಳ್ಳಿ, ಕೋಡಿಹಳ್ಳಿಯಲ್ಲಿ ಅಧಿಕಾರಿಗಳಿಗೆ ನಗದು ಹಣ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಅಧಿಕಾರಿಗಳಿಗೆ ದೊಡ್ಡ ಆಲಹಳ್ಳಿಯ ನಿವಾಸದಲ್ಲಿ ಸಿಕ್ಕಿದ್ದು ಬರೀ 1 ರೂ ನಾಣ್ಯಗಳು ಮಾತ್ರವಂತೆ. ಬೆಳಗ್ಗೆ 6 ಗಂಟೆಗೆ ಸಿಬಿಐ ಅಧಿಕಾರಿಗಳು ದೊಡ್ಡ ಆಲಹಳ್ಳಿಯ ನಿವಾಸದ ಮೇಲೆ ದಾಳಿ ಮಾಡಿದ್ದರು. ನಂತರ ಮಧ್ಯಾಹ್ನ 1 ಗಂಟೆಗೆ ಕೋಡಿಹಳ್ಳಿಯ ಗೌರಮ್ಮ ಇರುವ ನಿವಾಸದ ಮೇಲೆ ರೇಡ್ ಮಾಡಿದ್ದರು. ಕೋಡಿಹಳ್ಳಿ, ದೊಡ್ಡ ಆಲಹಳ್ಳಿಯ ನಿವಾಸಗಳಲ್ಲಿ ಪರಿಶೀಲನೆ ನಡೆಸಿ ಮಹಜರು ಪತ್ರಗಳಿಗೆ ಗೌರಮ್ಮರಿಂದ ಸಹಿ ಹಾಕಿಸಿಕೊಂಡಿದ್ದರು.

ಡಿಕೆ ಶಿವಕುಮಾರ್‍ಗೆ ಸಂಕಷ್ಟಗಳ ಮೇಲೆ ಸಂಕಷ್ಟ ಮುಂದುವರಿದಿದೆ. 3 ವರ್ಷಗಳ ಹಿಂದೆ ಗುಜರಾತ್ ಶಾಸಕರಿಗೆ ಆತಿಥ್ಯ ನೀಡಿದಂದಿನಿಂದ ಇಂದಿನವರೆಗೆ ಡಿಕೆಶಿ ಮೇಲೆ ತನಿಖಾ ಸಂಸ್ಥೆಗಳ ದಾಳಿ ನಡೆಯುತ್ತಲೇ ಇದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಬಳಿಕ ಈಗ ಸಿಬಿಐ ಸರದಿ. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಎದುರಾಗಿರೋ ಆರ್‍ಆರ್ ನಗರ, ಶಿರಾ ಬೈಎಲೆಕ್ಷನ್‍ನಲ್ಲಿ ಪಕ್ಷ ಗೆಲ್ಲಿಸಿ ತಮ್ಮ ಪವರ್ ತೋರಿಸೋಕೆ ಸನ್ನದ್ಧವಾಗಿದ್ದ ಡಿಕೆಶಿಗೆ ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಶಾಕ್ ನೀಡಿತ್ತು. ಕರ್ನಾಟಕ, ಮುಂಬೈ, ದೆಹಲಿ ಸೇರಿದಂತೆ ಏಕಕಾಲಕ್ಕೆ 14 ಕಡೆ ಸಿಬಿಐನ 60 ಜನ ಅಧಿಕಾರಿಗಳು ದಾಳಿ ಮಾಡಿದ್ದರು. ಇದನ್ನೂ ಓದಿ: 57 ಲಕ್ಷ ಹಣ ಪತ್ತೆ – ಡಿಕೆ ಸುರೇಶ್‌ ಅವರೇ ಈಗ ಏನು ಹೇಳ್ತೀರಿ?

ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಡಿಕೆಶಿ, 57 ಲಕ್ಷ ರೂ. ನಗದು ಸಿಕ್ಕಿದ ಬಗ್ಗೆ ಸರಿಯಾದ ಸ್ಪಷ್ಟನೆ ನೀಡಲಿಲ್ಲ. ಅಷ್ಟು ದುಡ್ಡು ಸಿಕ್ಕಿದರೆ ಸಂತೋಷ. ನಾನೇನು ಕದ್ದು ಮುಚ್ಚಿ ಏನು ಮಾಡಿಲ್ಲ. ನನ್ನ ಮನೆಯಲ್ಲಿ 1.77 ಲಕ್ಷ ಸಿಕ್ಕಿದೆ. ನನ್ನ ಕಚೇರಿಯಲ್ಲಿ ಸಿಬ್ಬಂದಿ ಖರ್ಚಿಗೆ ಅಂತ ಮೂರ್ನಾಲ್ಕು ಲಕ್ಷ ಸಿಕ್ಕಿರಬಹುದು. ದೆಹಲಿಯ ಸುರೇಶ್ ಮನೆಯಲ್ಲಿ ಎರಡ್ಮೂರು ಲಕ್ಷ ಸಿಕ್ಕಿರಬಹುದು. ಊರಿನಲ್ಲಿ ಎಷ್ಟು ಸಿಕ್ಕಿದೆ ಎನ್ನುವುದು ಗೊತ್ತಿಲ್ಲ ಎಂದರು. ಬೇರೆಯವರ ಮನೆಯಲ್ಲಿ ಏನು ಸಿಕ್ಕಿದ್ಯೋ ನಂಗೆ ಗೊತ್ತಿಲ್ಲ ಎಂದು ಹೇಳಿ ಜಾರಿಕೊಂಡಿದ್ದರು.

ವಿಚಾರಣೆ ಮುಗಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿವಕುಮಾರ್, ನಿಮ್ಮ ಪ್ರೀತಿಗೆ ಚಿರಋಣಿ, ಎಲೆಕ್ಷನ್ ಇರೋವರೆಗೂ ಇದು ನಡೆಯುತ್ತೆ. ನೀವು ಗೆಲ್ಲಿಸ್ಬೇಕು ಅಂತ ಕರೆ ನೀಡಿದ್ರು. ಅಲ್ಲದೆ, ಬಟ್ಟೆ ಸೀರೆ ಅದು ಇದು ಅಂತ ಎಲ್ಲಾ ಚೆಕ್ ಮಾಡಿದ್ರು. ಎಲ್ಲ ಹರಿಶ್ಚಂದ್ರನ ಮೊಮ್ಮಕ್ಕಳು. ರಾಜಕೀಯವಾಗಿ ತೊಂದರೆ ಕೊಡೋವ್ರು ಚೆನ್ನಾಗಿರಲಿ. ಆದರೆ ನಾನು ಹೆದರೋ ಮಗನೇ ಅಲ್ಲ ಗುಡುಗಿದ್ರು.

Share This Article
Leave a Comment

Leave a Reply

Your email address will not be published. Required fields are marked *