ಡಾಕ್ಟರ್ ಆಗುವ ಕನಸು ಹೊತ್ತು, ಲ್ಯಾಪ್‍ಟಾಪ್‍ಗಾಗಿ ತರಕಾರಿ ಮಾರಾಟ- ವಿದ್ಯಾರ್ಥಿನಿಗೆ ಜ್ಞಾನ ದೀವಿಗೆಯ ಟ್ಯಾಬ್

Public TV
1 Min Read

ಮೈಸೂರು: ಡಾಕ್ಟರ್ ಆಗುವ ಕನಸು ಹೊತ್ತು ವಿದ್ಯಾರ್ಥಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ತಯಾರಿಗಾಗಿ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗಲು ಲ್ಯಾಪ್‍ಟಾಪ್ ಖರೀದಿಗೆ ತರಕಾರಿ ಮಾರಾಟಕ್ಕೆ ಇಳಿದಿದ್ದಾಳೆ. ಇದನ್ನು ಗಮನಿಸಿದ ಪಬ್ಲಿಕ್ ಟಿವಿ, ವಿದ್ಯಾರ್ಥಿನಿಯ ಸಂಕಷ್ಟದ ಕುರಿತು ಸುದ್ದಿ ಬಿತ್ತರ ಮಾಡುವುದರ ಜೊತೆಗೆ ಜ್ಞಾನ ದೀವಿಗೆಯಡಿ ಟ್ಯಾಬ್ ನೀಡುವ ಮೂಲಕ ಸಹಾಯ ಮಾಡಿದೆ.

10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಸಾತಗಳ್ಳಿಯ ಕೀರ್ತನಾಳ ಮೊಬೈಲ್ ಕೆಟ್ಟು ಹೋಗಿರುವ ಹಿನ್ನೆಲೆ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗಲು ಸಮಸ್ಯೆಯಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹೊಸ್ತಿಲಲ್ಲಿ ಕ್ಲಾಸ್ ಅಟೆಂಡ್ ಮಾಡಲು ವಿದ್ಯಾರ್ಥಿನಿ ಪರದಾಡುತ್ತಿದ್ದಾಳೆ. ಹೀಗಾಗಿ ಲ್ಯಾಪ್‍ಟಾಪ್ ಅಥವಾ ಟ್ಯಾಬ್ ಖರೀದಿಗಾಗಿ ಸೊಪ್ಪು ಮಾರಾಟ ಮಾಡುತ್ತಿದ್ದಾಳೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರಗೆ ಸೊಪ್ಪು, ತರಕಾರಿ ಮಾರಾಟ ಮಾಡುತ್ತಿದ್ದಾಳೆ. ಹೀಗಾಗಿ ಪಬ್ಲಿಕ್ ಟಿವಿಯಿಂದ ಜ್ಞಾನ ದೀವಿಗೆಯಡಿ ಟ್ಯಾಬ್ ವಿತರಣೆ ಮಾಡಲಾಗಿದೆ.

ವಿದ್ಯಾರ್ಥಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧವಾಗಲು ಸಿದ್ಧ ಪಾಠ ಇರುವ ಟ್ಯಾಬ್‍ನ್ನು ಪಬ್ಲಿಕ್ ಟಿವಿಯ ಜ್ಞಾನ ದೀವಿಗೆ ಅಭಿಯಾನದಡಿ ನೀಡಲಾಯಿತು. ಟ್ಯಾಬ್ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ಕೀರ್ತನಾ, ಲ್ಯಾಪ್‍ಟಾಪ್, ಟ್ಯಾಬ್ ಖರೀದಿಗಾಗಿ ಕೆಲಸ ಮಾಡುತ್ತಿದ್ದೆ. ಇದೀಗ ಚೆನ್ನಾಗಿ ಓದುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.

ವಿದ್ಯಾರ್ಥಿನಿ ತಂದೆ ಮಾತನಾಡಿ, ನಾನು ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದೆ. ಇದೀಗ ಲಾಕ್‍ಡೌನ್‍ನಿಂದ ಸಮಸ್ಯೆಯಾಗಿತ್ತು. ಊಟಕ್ಕೇನು ಕೊರತೆ ಇರಲಿಲ್ಲ. ಆದರೆ 4 ತಿಂಗಳಿಂದ ಬಾಡಿಗೆ ಕಟ್ಟಿರಲಿಲ್ಲ. ಇತ್ತ ಮಗಳಿಗೆ ಓದಲು ಸಹ ಸಮಸ್ಯೆಯಾಗುತ್ತಿತ್ತು. ಪಬ್ಲಿಕ್ ಟಿವಿಯಿಂದ ಟ್ಯಾಬ್ ನೀಡಿರುವುದು ನೆರವಾಗಿದೆ. ತುಂಬಾ ಸಂತೋಷವಾಗುತ್ತಿದೆ. ಪಬ್ಲಿಕ್ ಟಿವಿಗೆ ಧನ್ಯವಾದಳು ಎಂದು ಹೇಳಿದ್ದಾರೆ.

ಬಾಲಕಿಯ ತಾಯಿ ಮಾತನಾಡಿ, ಮಗಳಿಗೆ ಓದುವ ಆಸೆ ತುಂಬಾ ಇದೆ, ಅವರ ಆಸೆಯನ್ನು ನಾವು ಈಡೇರಿಸುತ್ತೇವೆ. ಕಷ್ಟಪಟ್ಟಾದರೂ, ಇನ್ನೊಬ್ಬರ ಮನೆಯಲ್ಲಿ ಕೆಲಸ ಮಾಡಿಯಾದರೂ ಮಕ್ಕಳನ್ನು ಓದಿಸುತ್ತೇವೆ. ಕೀರ್ತನಾಗೆ ಡಾಕ್ಟರ್ ಆಗುವ ಆಸೆ ಇದೆ. ಅದನ್ನು ಪೂರೈಸುತ್ತೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *