ಠಾಣೆಯ ರೆಸ್ಟ್ ರೂಮಿನಲ್ಲಿ ಜೂಜಾಟ- ಐವರು ಕಾನ್ಸ್‌ಟೇಬಲ್ ಬಂಧನ

Public TV
1 Min Read

ದಾವಣಗೆರೆ: ಕೊರೊನಾ ಸಂಕಷ್ಟದಲ್ಲಿ ಹಗಲಿರುಳು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯವರು ಶ್ರಮಿಸುತ್ತಿದ್ದಾರೆ. ಆದರೆ ದಾವಣಗೆರೆಯ ಗ್ರಾಮಾಂತರ ಠಾಣೆಯಲ್ಲಿ ಕೆಲ ಸಿಬ್ಬಂದಿ ರೆಸ್ಟ್ ರೂಮಿನಲ್ಲಿ ಜೂಜಾಟವಾಡಿ ಸಿಕ್ಕಿ ಬಿದ್ದಿದ್ದಾರೆ.

ಮಂಗಳವಾರ ರಾತ್ರಿ ದಾವಣಗೆರೆಯ ಗ್ರಾಮಾಂತರ ಪೊಲೀಸ್ ಠಾಣೆ ಆವರಣದ ವಿಶ್ರಾಂತಿ ಕೊಠಡಿಯಲ್ಲಿ ಜೂಜಾಟವಾಡುತ್ತಿದ್ದ ಐವರು ಕಾನ್ಸ್‌ಟೇಬಲ್‌ಗಳನ್ನು ಬಂಧಿಸಲಾಗಿದೆ. ಠಾಣೆಯ ರೆಸ್ಟ್ ರೂಂಮಿನಲ್ಲೇ ಜೂಜಾಟವಾಡುತ್ತಿದ್ದು, ರೆಡ್ ಹ್ಯಾಂಡಾಗಿ ಐಜಿ ಸ್ಕ್ವಾಡ್‍ಗೆ ಸಿಕ್ಕಿ ಬಿದ್ದಿದ್ದಾರೆ.

ದಾವಣಗೆರೆ ಗ್ರಾಮಾಂತರ ಠಾಣೆಯ ರೆಸ್ಟ್ ರೂಮಿನಲ್ಲಿ ಇಸ್ಪೀಟ್ ಆಡುತ್ತಿದ್ದಾರೆ ಎಂದು ಪೂರ್ವ ವಲಯದ ಐಜಿ ರವಿಯವರಿಗೆ ಮಾಹಿತಿ ಹೋಗಿತ್ತು. ಖಚಿತ ಮಾಹಿತಿ ಮೇರೆಗೆ ಐಜಿ ನಿರ್ದೇಶನದಂತೆ ರೇಡ್ ಮಾಡಲಾಗಿದೆ. ಆಗ ಕಾನ್ಸ್‌ಟೇಬಲ್‌ಗಳಾದ ಲೋಹಿತ್, ನಾಗರಾಜ್, ಮಂಜಪ್ಪ, ಮಹೇಶ್ ಮತ್ತು ಬಾಲರಾಜ್ ಸಿಕ್ಕಿಬಿದ್ದಿದ್ದಾರೆ.

ಐವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಜೂಜಾಟದಲ್ಲಿ ತೊಡಗಿದ್ದ ಐವರಿಂದ 29 ಸಾವಿರ ರೂಪಾಯಿಯನ್ನು ವಶಪಡೆಯಲಾಗಿದೆ. ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡದೆ ಪೊಲೀಸ್ ಠಾಣೆಯ ರೆಸ್ಟ್ ರೂಮಿನಲ್ಲೇ ರಾಜಾರೋಷವಾಗಿ ಇಸ್ಪೀಟ್ ಆಡುತ್ತಿದ್ದು, ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ಜಿಲ್ಲಾಡಳಿತ ಕೊರೊನಾ ಕರ್ತವ್ಯಕ್ಕೆ ನೇಮಕ ಮಾಡಿತ್ತು. ಆದರೆ ಕರ್ತವ್ಯವನ್ನು ಮರೆತು ಲಾಕ್‍ಡೌನ್ ಸಮಯದಲ್ಲಿ ಪಿಬಿ ರಸ್ತೆಯಲ್ಲಿನ ಬಿಲಾಲ್ ಕಾಂಪೌಂಡ್ ಆವರಣದಲ್ಲಿ ಈ ಸಿಬ್ಬಂದಿ ಜೂಜಾಟದಲ್ಲಿ ತೊಡಗಿದ್ದರು. ಈ ಸಂಬಂಧ ಕೆಟಿಜೆ ನಗರ ಪೊಲೀಸರು ದಾಳಿ ನಡೆಸಿ 7 ಜನ ಶಿಕ್ಷಣ ಇಲಾಖೆ ಸಿಬ್ಬಂದಿಯನ್ನು ಬಂಧಿಸಿದ್ದರು. ಅಲ್ಲದೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *