ಟೆಕ್ಕಿಗಳಿಗೆ ಬಿಗ್‌ ಶಾಕ್‌ ನೀಡಿದ ಟ್ರಂಪ್ – ಭಾರತದ ಕಂಪನಿಗಳ ಮೇಲೆ ಪರಿಣಾಮ ಏನು?

Public TV
3 Min Read

‌- ವರ್ಷಾಂತ್ಯದವರೆಗೆ ಎಚ್‌1ಬಿ ವೀಸಾ ಸಿಗಲ್ಲ
– ಅಮೆರಿಕದ ಹಿತ ಕಾಪಾಡಲು ನಿರ್ಧಾರ ಎಂದ ಟ್ರಂಪ್

ವಾಷಿಂಗ್ಟನ್‌: ಭಾರತೀಯ ಟೆಕ್ಕಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶಾಕ್‌ ನೀಡಿದ್ದಾರೆ. ಈ ವರ್ಷಾಂತ್ಯದವರೆಗೆ ಅಮೆರಿಕದಲ್ಲಿ ಉದ್ಯೋಗಕ್ಕೆ ತೆರಳುವ ಮಂದಿಗೆ ವೀಸಾ ನೀಡದೇ ಇರಲು ಟ್ರಂಪ್‌ ತೀರ್ಮಾನ ಕೈಗೊಂಡಿದ್ದಾರೆ.

ಎಚ್‌1ಬಿ, ಎಲ್‌ ಮತ್ತು ತಾತ್ಕಾಲಿಕ ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುತ್ತಿದ್ದ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ವೀಸಾವನ್ನು ಡಿಸೆಂಬರ್‌ ಅಂತ್ಯದವರೆಗೆ ನೀಡದೇ ಇರಲು ಅಮೆರಿಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಕೋವಿಡ್‌ 19ನಿಂದಾಗಿ ದೇಶದಲ್ಲಿ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಜನರ ಉದ್ಯೋಗವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಟ್ರಂಪ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್‌ 31ರವರೆಗೆ ವೀಸಾ ನಿರ್ಬಂಧಿಸುವ ನಿರ್ಧಾರಕ್ಕೆ ಟ್ರಂಪ್‌ ಸೋಮವಾರ ಸಹಿ ಹಾಕಿದ ಕಾರಣ ಇನ್ನು ಮುಂದೆ ಡಿಸೆಂಬರ್‌ ವರೆಗೆ ವಿದೇಶದ ಯಾವ ವ್ಯಕ್ತಿ ಅಮೆರಿಕದಲ್ಲಿ ತೆರಳಿ ಉದ್ಯೋಗ ಮಾಡಲು ಸಾಧ್ಯವಿಲ್ಲ.

2020ರ ಫೆಬ್ರವರಿ ಮತ್ತು ಏಪ್ರಿಲ್‌ ನಲ್ಲಿ 2 ಕೋಟಿಗೂ ಹೆಚ್ಚು ಅಮೆರಿಕದ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಪತಿಗಳು ಈ ಜಾಗವನ್ನು ಭರ್ತಿ ಮಾಡಲು ಎಚ್‌-1ಬಿ ಮತ್ತು ಎಲ್‌ ವೀಸಾ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಅಮೆರಿಕದ ಯುವ ಜನತೆ ಉದ್ಯೋಗವನ್ನು ಕಳೆದುಕೊಂಡಿದ್ದಾರ. ಈ ನಿಟ್ಟಿನಲ್ಲಿ ಅವರನ್ನೆಲ್ಲ ರಕ್ಷಿಸಲು ಉದ್ಯೋಗ ವೀಸಾವನ್ನು ನಿರ್ಬಂಧಿಸಲಾಗಿದೆ ಎಂದು ಟ್ರಂಪ್‌ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

ಟ್ರಂಪ್‌ ನಿರ್ಧಾರಕ್ಕೆ ಈಗಾಗಲೇ ಭಾರೀ ವಿರೋಧ ವ್ಯಕ್ತವಾಗಿದೆ. ಗೂಗಲ್‌ ಕಂಪನಿಯ ಸಿಇಒ ಸುಂದರ್‌ ಪಿಚೈ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಅಮೆರಿಕದ ಆರ್ಥಿಕತೆಯ ಯಶಸ್ಸಿಗೆ ವಲಸೆ ಬಹಳಷ್ಟು ನೆರವಾಗಿದೆ. ಟೆಕ್ನಾಲಜಿಯಲ್ಲಿ ಗೂಗಲ್‌ ಜಾಗತಿಕ ನಾಯಕನಾಗಲು ವಲಸೆ ಬಹಳಷ್ಟು ನೆರವಾಗಿದೆ. ಇಂದಿನ ಘೋಷಣೆಯಿಂದ ನಮಗೆ ನಿರಾಸೆಯಾಗಿದೆ. ನಾವು ವಲಸಿಗರ ಪರವಾಗಿ ಇರುತ್ತೇವೆ ಮತ್ತು ಎಲ್ಲರಿಗೂ ಕೆಲಸದ ಅವಕಾಶವನ್ನು ವಿಸ್ತರಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏನಿದು ಎಚ್‌-1ಬಿ, ಎಚ್‌-2ಬಿ, ಎಲ್‌-1 ವೀಸಾ?
ವಲಸಿಗರಿಗೆ ದೇಶದಲ್ಲಿ ಉದ್ಯೋಗ ನೀಡಲು ಅಮೆರಿಕ ಸರ್ಕಾರ ಮೂರು ರೀತಿಯ ವೀಸಾಗಳನ್ನು ನೀಡುತ್ತದೆ. 1952 ರಿಂದ ಅಮೆರಿಕ ಸರ್ಕಾರ ವಲಸಿಗರಿಗೆ ಉದ್ಯೋಗ ವೀಸಾವನ್ನು ನೀಡಿದೆ. ಹೆಚ್-1ಬಿ, ಹೆಚ್-2ಬಿ ಮತ್ತು ಎಲ್-1 ವೀಸಾ ಈ ಮೂರೂ ಕೂಡ ವರ್ಕ್ ವೀಸಾ ಮಾತ್ರ ಆಗಿದ್ದು ತಾತ್ಕಾಲಿಕವಾಗಿ ನೀಡಲಾಗುತ್ತದೆ. ಐಟಿ ಮತ್ತು ಇತರೇ ಕ್ಷೇತ್ರಗಳ ಉನ್ನತ ಮಟ್ಟ ಉದ್ಯೋಗಿಗಳಿಗೆ ಎಚ್‌1ಬಿ ವೀಸಾ ನೀಡುತ್ತದೆ. 7 ವರ್ಷದ ಅವಧಿಯವರೆಗೆ ಉದ್ಯೋಗ ಮಾಡಲು ಎಲ್‌1 ವೀಸಾ ನೀಡುತ್ತದೆ. ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಎಚ್‌2ಬಿ ವೀಸಾ ನೀಡುತ್ತದೆ.

ಭಾರತೀಯರ ಮೇಲೆ ಪರಿಣಾಮ ಏನು?
ಅಮೆರಿಕ ಸರ್ಕಾರ ಒಂದು ವರ್ಷಕ್ಕೆ ಗರಿಷ್ಟ 85 ಸಾವಿರ ಮಂದಿಗೆ ಮಾತ್ರ ಎಚ್‌-1ಬಿ ವೀಸಾ ನೀಡುತ್ತದೆ. ಭಾರತ ಐಟಿ ಕಂಪನಿಗಳು ಎಚ್‌-1ಬಿ ವೀಸಾದ ಅಡಿಯಲ್ಲಿ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುತ್ತದೆ. ವೀಸಾ ಅವಧಿ ವಿಸ್ತರಿಸದೇ ಇರುವ ಮತ್ತು ಜೂನ್‌ 23ಕ್ಕೆ ವೀಸಾ ಅವಧಿ ಅಂತ್ಯವಾಗುತ್ತದೋ ಅವರಿಗೆ ಮತ್ತೆ ವೀಸಾ ಸಿಗುವುದಿಲ್ಲ. 2020ರ ಏಪ್ರಿಲ್‌ 1 ರ ವೇಳೆ ಅಮೆರಿಕದ ಪೌರತ್ವ ಮತ್ತು ವಲಸೆ ವಿಭಾಗಕ್ಕೆ ಒಟ್ಟು 2.5 ಲಕ್ಷ ಮಂದಿ ಎಚ್‌-1ಬಿ ವೀಸಾಕ್ಕೆ ಅರ್ಜಿ ಹಾಕಿದ್ದು ಈ ಪೈಕಿ 1.84 ಲಕ್ಷ ಭಾರತೀಯರೇ ಆಗಿದ್ದಾರೆ.

ಇಲ್ಲಿಯವರೆಗೆ ಲಾಟರಿ ಆಯ್ಕೆ ಮೂಲಕ ಅಮೆರಿಕದ ವೀಸಾ ಸಿಗುತ್ತಿತ್ತು. ಆದರೆ ಇನ್ನು ಮುಂದೆ ಕಂಪನಿಯಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಹೆಚ್ಚು ಕೌಶಲ್ಯ ಇರುವ ಉದ್ಯೋಗಿಗಳಿಗೆ ಮಾತ್ರ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಭಾರತದ ಐಟಿ ಕಂಪನಿಗಳು ಕಡಿಮೆ ಸಂಬಳ ನೀಡುವ ಮೂಲಕ ಭಾರತೀಯ ಟೆಕ್ಕಿಗಳನ್ನು ಉದ್ಯೋಗಕ್ಕೆ ಕಳುಹಿಸುತಿತ್ತು. ಒಂದು ವೇಳೆ ಅಮೆರಿಕದವರಿಗೆ ಉದ್ಯೋಗ ನೀಡಿದರೆ ಹೆಚ್ಚು ಸಂಬಳ ನೀಡಬೇಕಿತ್ತು.

ಕನಿಷ್ಠ ಸಂಬಳ ಈಗ ಎಷ್ಟಿರಬೇಕು?
ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ 2017ರಲ್ಲಿ ನಿರ್ಧಾರ ಕೈಗೊಂಡಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿಯಾಗಿದ್ದು, ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.

ಈ ಮೊದಲು ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇತ್ತು. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ 2017ರವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಟೆಕ್ಕಿಗಳನ್ನು ಎಚ್-1ಬಿ ವೀಸಾದ ಅಡಿಯಲ್ಲಿ ಅಮೆರಿಕ ದೇಶಕ್ಕೆ ಕಳುಹಿಸಿಕೊಡುತಿತ್ತು. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *