ಟೀಂ ಇಂಡಿಯಾಗೆ ಈ ನಾಲ್ವರ ಕಮ್‍ಬ್ಯಾಕ್ ಕಷ್ಟ ಕಷ್ಟ!

Public TV
3 Min Read

ನವದೆಹಲಿ: ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಮಾಜಿ ನಾಯಕ ಎಂ.ಎಸ್.ಧೋನಿ ಸೇರಿದಂತೆ ಅನೇಕರು ಸರ್ವ ಪ್ರಯತ್ನ ನಡೆಸಿದ್ದಾರೆ. ಈ ಪೈಕಿ ನಾಲ್ವರು ಮತ್ತೆ ರಾಷ್ಟ್ರೀಯ ತಂಡ ಸೇರುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿವೆ.

ಭಾರತದ ಕ್ರಿಕೆಟ್ ತಂಡದ ಪರ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಹರ್ಭಜನ್ ಸಿಂಗ್ ಇತ್ತೀಚೆಗೆ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಐಪಿಎಲ್ ಮೂಲಕ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಡಲು ಎಂ.ಎಸ್.ಧೋನಿ ಮುಂದಾಗಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಟೂರ್ನಿ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

ಹರ್ಭಜನ್ ಸಿಂಗ್ ಸುಮಾರು 11 ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಆಯ್ಕೆಯಾಗಿದ್ದರು. 2011ರ ವಿಶ್ವಕಪ್ ನಂತರ ಎಂ.ಎಸ್. ಧೋನಿ ಮತ್ತು ತಂಡದ ಆಡಳಿತ ಮಂಡಳಿ ಅವರನ್ನು ಕೈಬಿಟ್ಟು ಆರ್.ಅಶ್ವಿನ್‍ಗೆ ಮಣೆ ಹಾಕಿತು. ಹೀಗಾಗಿ ಮುಂದಿನ 6 ವರ್ಷಗಳವರೆಗೆ ಎಲ್ಲಾ ಸ್ವರೂಪಗಳಲ್ಲಿ ಸ್ಪಿನ್ ದಾಳಿಯನ್ನು ಆರ್.ಅಶ್ವಿನ್ ಮುನ್ನಡೆಸಿದರು.

ಸದ್ಯ ಐಪಿಎಲ್ ಮಾತ್ರ ಆಡುತ್ತಿರುವ ಹರ್ಭಜನ್ ಸಿಂಗ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗುವ ನಿರೀಕ್ಷೆಯಿಲ್ಲ. ಆದರೆ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಹೊರತಾಗಿಯೂ ಐಪಿಎಲ್ ಅಥವಾ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಇತ್ತ ಅಂಬಟಿ ರಾಯುಡು, ಸ್ಟುವರ್ಟ್ ಬಿನ್ನಿ, ಮನೋಜ್ ತಿವಾರಿ ಹಾಗೂ ಪಾರ್ಥಿವ್ ಪಟೇಲ್ ಅವರು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡುವುದು ಭಾರೀ ಕಷ್ಟ ಎನ್ನಲಾಗುತ್ತಿದೆ.

ಅಂಬಟಿ ರಾಯುಡು:
2019ರ ವಿಶ್ವಕಪ್‍ಗೆ ಅಂಬಟಿ ರಾಯುಡು ಅವರನ್ನು ಆಯ್ಕೆ ಸಮಿತಿ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿತ್ತು. ಅಷ್ಟೇ ಅಲ್ಲದೆ ಟೂರ್ನಿ ನಡುವೆ ಆಟಗಾರರು ಗಾಯದಿಂದ ವಿಶ್ರಾಂತಿಗೆ ಜಾರಿದಾಗ ಎರಡು ಅವಕಾಶಗಳು ಇದ್ದಾಗಲೂ ಅವರನ್ನು ಕಡೆಗಣಿಸಲಾಗಿತ್ತು. ಬದಲಾಗಿ ರಿಷಬ್ ಪಂತ್ ಮತ್ತು ಮಾಯಾಂಕ್ ಅಗರ್ವಾಲ್ ಅವರಿಗೆ ಮಣೆ ಹಾಕಲಾಗಿತ್ತು. ಈ ಮೂಲಕ ಟೀಂ ಇಂಡಿಯಾದಲ್ಲಿ ಅಂಬಟಿ ರಾಯುಡು ಕಮ್‍ಬ್ಯಾಕ್ ಕಷ್ಟ ಎನ್ನುವ ಸಂದೇಶವನ್ನು ಬಿಸಿಸಿಐ ಪರೋಕ್ಷವಾಗಿ ರವಾನಿಸಿತ್ತು. ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ ನಲ್ಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದರಿಂದಾಗಿ ರಾಯುಡು ಅವರಿಗಿದ್ದ ಅವಕಾಶ ಕೈತಪ್ಪಿದೆ.

ಸ್ಟುವರ್ಟ್ ಬಿನ್ನಿ:
2016ರಿಂದ ಟೀಂ ಇಂಡಿಯಾದಿಂದ ಹೊರಗುಳಿದ ನಂತರ ಸ್ಟುವರ್ಟ್ ಬಿನ್ನಿ ದೇಶೀಯ ಕ್ರಿಕೆಟ್‍ನಲ್ಲಿ ಮುಂದುವರಿದಿದ್ದಾರೆ. 2018ರಲ್ಲಿ ಅವರು ಕರ್ನಾಟಕ ತಂಡದಿಂದ ಹೊರಗುಳಿದಿದ್ದರು. 2019-20ರ ಮಧ್ಯೆ ನಾಗಾಲ್ಯಾಂಡ್ ತಂಡ ಸೇರಲು ಮುಂದಾಗಿದ್ದರು. ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡವು ಬಿನ್ನಿ ಅವರನ್ನು 13ನೇ ಆವೃತ್ತಿಗೆ ಕೈಬಿಟ್ಟಿದೆ. ಬಳಿಕ ನಡೆದ ಹರಾಜಿನಲ್ಲಿ ಸ್ಟುವರ್ಟ್ ಬಿನ್ನಿ ಅವರನ್ನು ಯಾವುದೇ ತಂಡ ಖರೀದಿಸಲು ಮುಂದೆ ಬರಲಿಲ್ಲ.

ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಲ್ಲಿ ಆಲ್‍ರೌಂಡರ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಬಿನ್ನಿ ಕಮ್‍ಬ್ಯಾಕ್ ಕಷ್ಟ ಎಂದು ಹೇಳಲಾಗುತ್ತಿದೆ. 2015ರ ವಿಶ್ವಕಪ್ ತಂಡದ ಸದಸ್ಯರಾಗಿದ್ದ ಬಿನ್ನಿ 2014ರಿಂದ 2016ರವರೆಗೆ ಆರು ಟೆಸ್ಟ್, 14 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ.

ಮನೋಜ್ ತಿವಾರಿ:
ಎಂ.ಎಸ್.ಧೋನಿ ಹಾಗೂ ತಂಡದ ಆಯ್ಕೆ ಸಮಿತಿಯ ಒಂದು ಕಾಲದ ಮೊದಲ ಆಯ್ಕೆಯ ಆಟಗಾರ ಮನೋಜ್ ತಿವಾರಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪರದಾಡಿದರು. ಶತಕ ಗಳಿಸಿದ ನಂತರವೂ ಅವರು ಆಡುವ ಇಲೆವನ್ ತಂಡದಿಂದ ಹೊರಗುಳಿದರು. ಟೀಂ ಇಂಡಿಯಾ ಜೊತೆಗೆ ಪ್ರಪಂಚದಾದ್ಯಂತ ಪ್ರವಾಸ ಮಾಡಿದರು ಮನೋಜ್ ತಿವಾರಿ, 2008ರಿಂದ 2015ರವರೆಗೆ ಕೇವಲ 12 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರು 2018ರಿಂದ ಭಾರತ ಎ ಪರ ಆಡಿಲ್ಲ. ತಿವಾರಿ ದೇಶೀಯ ಕ್ರಿಕೆಟ್‍ನಲ್ಲಿ ಬಂಗಾಳ ಪರ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.

ಪಾರ್ಥಿವ್ ಪಟೇಲ್:
ಎಂ.ಎಸ್.ಧೋನಿ ಅವರ ಎಂಟ್ರಿ ಪಾರ್ಥಿವ್ ಪಟೇಲ್ ಅವರನ್ನು ಟೀಂ ಇಂಡಿಯಾದಿಂದ ದೂರವಾಗುವಂತೆ ಮಾಡಿತು ಎನ್ನಲಾಗುತ್ತಿದೆ. 2018-19ರಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅವರು ಟೆಸ್ಟ್ ತಂಡದ ಭಾಗವಾಗಿದ್ದರು. ಆದರೆ ರಿಷಬ್ ಪಂತ್ ಅವರು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರಿಂದ ಅವಕಾಶ ಸಿಗಲಿಲ್ಲ. ಪಾರ್ಥಿವ್ ಪಟೇಲ್ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ವೃದ್ಧಿಮಾನ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *