ಟಿಕ್‍ಟಾಕ್‍ನಿಂದ ಪಿಎಂ ಕೇರ್ಸ್ ಫಂಡ್‍ಗೆ 30 ಕೋಟಿ ಬಂದಿದೆ: ಖಾದರ್

Public TV
2 Min Read

– 59 ಚೀನಾ ಆ್ಯಪ್ ಬ್ಯಾನ್ ಮಾಡಿದ್ದಕ್ಕೆ ಶಾಸಕರು ವಿರೋಧ

ಮಂಗಳೂರು: ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶಾಸಕ ಯು.ಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಆ್ಯಪ್ ಬಂದ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಚೈನಾಗೆ ಆ್ಯಪ್‍ನಿಂದ ನಷ್ಟ ಇಲ್ಲ. ಭಾರತಕ್ಕೆ ಆ್ಯಪ್ ಬ್ಯಾನ್‍ನಿಂದ ಲಾಭ ಇಲ್ಲ. ಪಿಎಂ ಕೇರ್ಸ್ ಫಂಡ್‍ಗೆ ಟಿಕ್‍ಟಾಕ್‍ನಿಂದ 30 ಕೋಟಿ ಬಂದಿದೆ. ಆ ಹಣವನ್ನು ಸರ್ಕಾರ ವಾಪಸ್ ಕೊಡಲಿ. ಸರ್ಕಾರಕ್ಕೆ ಅವರ ಹಣವನ್ನು ತೆಗದುಕೊಳ್ಳೋಕೆ ನಾಚಿಕೆ ಆಗೋದಿಲ್ವಾ ಎಂದು ಮರು ಪ್ರಶ್ನೆ ಹಾಕಿದ್ರು.

ಚೀನಾ ಆ್ಯಪ್ ಕಂಪನಿಯಲ್ಲಿ ಭಾರತೀಯರು ಉದ್ಯೋಗದಲ್ಲಿದ್ದರು. ಈಗ ಅವರು ಕೆಲಸ ಕಳೆದುಕೊಂಡಿದ್ದಾರೆ. ಆ್ಯಪ್ ಮೂಲಕ ಭಾರತೀಯರು ಆದಾಯ ಪಡೆಯುತ್ತಿದ್ದರು. ಪ್ರಚಾರಕ್ಕೋಸ್ಕರ ಸರ್ಕಾರ ಆ್ಯಪ್ ಬ್ಯಾನ್ ಮಾಡಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದಿದೆ. ಚೀನಾದವರು ಭಾರತದ ನಿರ್ಧಾರ ನೋಡಿ ನಗುವ ಪರಿಸ್ಥಿತಿ ಬಂದಿದೆ ಎಂದರು.

ಪ್ರಿಯಾಂಕಾ ಗಾಂಧಿಗೆ ಸರ್ಕಾರದ ಬಂಗಲೆ ವಾಪಾಸ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿದ ಶಾಸಕರು, ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಹವಾ ಇದೆ. ಇದರಿಂದ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಪ್ರಿಯಾಂಕಾ ಗಾಂಧಿಯ ತಂದೆ, ಅಜ್ಜಿಯನ್ನು ಭಯೋತ್ಪಾದಕರು ಕೊಂದಿದ್ದಾರೆ. ಹಾಗಾಗಿ ಪ್ರಿಯಾಂಕಾ ಗಾಂಧಿಗೂ ರಕ್ಷಣೆ ನೀಡಲಾಗಿದೆ. ದೆಹಲಿಯಲ್ಲಿ ತುಂಬಾ ಮಂದಿ ಸರ್ಕಾರಿ ಬಂಗಲೆಯಲ್ಲಿ ಇದ್ದಾರೆ. ಅವರ ಹೆಸರನ್ನು ಸರ್ಕಾರ ಬಹಿರಂಗ ಪಡಿಸಲಿ. ದ್ವೇಷದ ರಾಜಕಾರಣವನ್ನು ಜನರು ಸಹಿಸೋದಿಲ್ಲ ಎಂದು ಗರಂ ಆದರು.

ಇನ್ನು ಬಳ್ಳಾರಿಯಲ್ಲಿ ಕೋವಿಡ್ ಸೋಂಕಿತರ ಅಮಾನವೀಯ ಅಂತ್ಯಸಂಸ್ಕಾರ ವಿಚಾರದ ಕುರಿತು ಮಾತನಾಡಿ, ಅಮಾನವೀಯವಾಗಿ ನಡೆದುಕೊಂಡ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಆರೋಗ್ಯ ಸಚಿವರ ಜಿಲ್ಲೆ ಅಂತ ರಿಯಾಯಿತಿ ಕೊಡಲಾಗಿದ್ಯಾ?, ಪ್ರಕರಣದ ಕುರಿತು ರಾಜ್ಯ ಮಟ್ಟದ ತನಿಖೆಯಾಗಬೇಕು. ಮುಂದಿನ ದಿನದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಅಂಬುಲೆನ್ಸ್ ಸೇವೆ ಇಲ್ಲ. ಎಲ್ಲಾ ಧರ್ಮದವರಿಗೂ ಸರಿಯಾದ ಅಂತ್ಯಕ್ರಿಯೆ ಮಾಡಲು ಸರ್ಕಾರ ಸ್ಥಳ ಗುರುತಿಸಬೇಕು ಎಂದು ಖಾದರ್ ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *