ಟಿಎಂಸಿ ಗೂಂಡಾಗಳಿಂದ ಕಂಟ್ರಿ ಬಾಂಬ್ ಎಸೆತ- ಪಶ್ಚಿಮ ಬಂಗಾಳದಲ್ಲಿ ತೇಜಸ್ವಿ ಸೂರ್ಯ ಗುಡುಗು

Public TV
4 Min Read

– ಬಿಜೆಪಿಯಿಂದ ಸಿಎಂ ಮಮತಾ ಬ್ಯಾನರ್ಜಿ ಕಚೇರಿಗೆ ಮುತ್ತಿಗೆ ಯತ್ನ
– ಕಾರ್ಯಕರ್ತರು ಪೊಲೀಸರ ಮಧ್ಯೆ ಸಂಘರ್ಷ
– ಜಲಫಿರಂಗಿ, ಲಾಠಿ ಚಾರ್ಜ್ ಮೂಲಕ ನಿಯಂತ್ರಣ
– ಸಿಎಂ ಗೃಹ ಕಚೇರಿ ಬಳಿ ಪರಿಸ್ಥಿತಿ ಉದ್ವಿಗ್ನ

ಕೋಲ್ಕತ್ತಾ: ಬಿಜೆಪಿ ಕಾರ್ಯಕರ್ತರು ಹಾಗೂ ಪಶ್ಚಿಮ ಬಂಗಾಳ ಪೊಲೀಸರ ಮಧ್ಯೆ ಭಾರೀ ಪ್ರಮಾಣದ ಸಂಘರ್ಷ ನಡೆದಿದ್ದು, ಅಶ್ರುವಾಯು, ಜಲ ಫಿರಂಗಿ ಹಾಗೂ ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಅಲ್ಲದೆ ರ‌್ಯಾಲಿ ವೇಳೆ ತೃಣಮೂಲ ಕಾಂಗ್ರೆಸ್‍ನವರು ಕಂಟ್ರಿ ಬಾಂಬ್ ಎಸೆದಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಹೌರಾದ ಸಚಿವಾಲಯ ಕಚೇರಿ ‘ನಬಣ್ಣ’ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಬಿಜೆಪಿ ಆಯೋಜಿಸಿದ್ದ ‘ನಬಣ್ಣ ಚಲೋ ಜಾಥಾ’ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆದಿದೆ. ಪಶ್ಚಿಮ ಬಂಗಾಳದ ಸಚಿವಾಲಯ ‘ನಬಣ್ಣ’ ಕಡೆಗೆ ಮೆರವಣಿಗೆ ತೆರಳುತ್ತಿದ್ದಂತೆ ಪೊಲೀಸರು ಸಾವಿರಾರು ಕಾರ್ಯಕರ್ತರ ಕಡೆಗೆ ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಜಾಥಾ ತಡೆಯಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಅಶ್ರುವಾಯುವನ್ನು ಸಹ ಸಿಡಿಸಿದ್ದಾರೆ. ಅಲ್ಲದೆ ಜಲಫಿರಂಗಿ ಮೂಲಕ ಗುಂಪನ್ನು ಚದುರಿಸಿದ್ದಾರೆ. ಇಂದು ಬೆಳಗ್ಗೆಯೇ ಪೊಲೀಸರು ಬಿಜೆಪಿ ರಾಜ್ಯ ಕಚೇರಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಜಾಥಾ ಪ್ರಾರಂಭಿಸಿದ ಬಿಜೆಪಿ ಯುವ ಕಾರ್ಯಕರ್ತರು, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಘಟನೆ ಕುರಿತು ಇತ್ತೀಚೆಗೆ ಆಯ್ಕೆಯಾಗಿರುವ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಟ್ವೀಟ್ ಮಾಡುವ ಮೂಲಕ ಕಿಡಿ ಕಾರಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಸುಮ್ಮನೇ ಸಿಗುವುದಿಲ್ಲ. ಇದಕ್ಕಾಗಿ ಯಾರಾದರು ಬೆಲೆ ತೆರಬೇಕಾಗುತ್ತದೆ. ನಾಳಿನ ಪೀಳಿಗೆಯ ಬಂಗಾಳಿ ಯುವ ಸಮೂಹ ಕೃತಜ್ಞಾಪೂರ್ವಕವಾಗಿ ಇಂದಿನ ಯುವ ಮೋರ್ಚಾ ಕಾರ್ಯಕರ್ತರನ್ನು ಸ್ಮರಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.

ವಿಶೇಷವೆಂದರೆ ಪಶ್ಚಿಮ ಬಂಗಾಳ ಸರ್ಕಾರ ಬುಧವಾರ ಸಂಜೆ ಕಟ್ಟಡದ ಎಲ್ಲ ಕಚೇರಿಗಳನ್ನು ಎರಡು ದಿನಗಳ ವರೆಗೆ(ಗುರುವಾರ ಹಾಗೂ ಶುಕ್ರವಾರ) ಸ್ಯಾನಿಟೈಸ್ ಮಾಡುವ ಸಲುವಾಗಿ ಮುಚ್ಚಲಾಗುವುದು ಎಂದು ಘೋಷಿಸಿತ್ತು. ಕೋಲ್ಕತ್ತಾದ ಹಳೆಯ ಸಚಿವಾಲಯವಾದ ರೈಟರ್ಸ್ ಕಟ್ಟಡವನ್ನು ಸಹ ಮುಚ್ಚಲಾಗಿದೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು.

ಯೋಜನೆ ರೂಪಿಸಿದಂತೆ ಕೋಲ್ಕತ್ತಾ ಹಾಗೂ ಹೌರಾದ ವಿವಿಧ ಭಾಗಗಳಿಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಂಘಟಿತರಾಗಿ ನಬಣ್ಣ ಚೆಲೋ ನಡೆಸಿದರು. ಸುಮಾರು 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನಬಣ್ಣ ಚೆಲೋ ನಡೆಸುವುದಕ್ಕೂ ಮುನ್ನ ತೇಜಸ್ವಿ ಸೂರ್ಯ ಅವರು ಇಂದು ಬೆಳಗ್ಗೆ ಸ್ವಾಮಿ ವಿವೇಕಾನಂದರ ಮನೆಗೆ ಭೇಟಿ ನೀಡಿದ್ದರು.

ಬುಧವಾರ ಸಹ ಸುದ್ದಿಗೋಷ್ಠಿ ನಡೆಸಿದ್ದ ತೇಜಸ್ವಿಸೂರ್ಯ, ಭಯಭೀತರಾಗಿ ನಬಣ್ಣ ಬಂದ್ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೆ ಮಮತಾ ದೀದಿ ಭಯಭೀತರಾಗಿದ್ದಾರೆ. ಹೀಗಾಗಿಯೇ ಅವರು ಸಿಎಂ ಕಚೇರಿಯನ್ನು ಮುಚ್ಚಿದ್ದಾರೆ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ. ಇದು ಬಂಗಾಳದಲ್ಲಿ ನಿಜವಾದ ಪರಿವರ್ತನೆಯ ಸಂಕೇತವಾಗಿದೆ. ಇದನ್ನು ರಾಜ್ಯದ ದೇಶಭಕ್ತ ಯುವಕರು ಮುನ್ನಡೆಸುತ್ತಿದ್ದಾರೆ. ಇಡೀ ದೇಶ ಅವರೊಂದಿಗೆ ಇದೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *