ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಪದೇ ಪದೇ ತಕರಾರುಗಳನ್ನು ಮಾಡಿಕೊಂಡು ಸ್ಪರ್ಧಿಗಳೊಂದಿಗೆ ಮಾತಿನ ಸಮರಕ್ಕೆ ಸಿದ್ಧರಾಗುವ ಪ್ರಶಾಂತ್ ಸಂಬರ್ಗಿ ಅವರ ವೀಕ್ನೆಸ್ ಒಂದನ್ನು ಮನೆಯ ಕ್ಯಾಪ್ಟನ್ ಮಂಜು ಅವರು ಬಯಲು ಮಾಡಿದ್ದಾರೆ.
ಬಿಗ್‍ಮನೆಯಲ್ಲಿ ನಡೆದ ‘ಬಾಲು ಬಲಿ’ ಟಾಸ್ಕ್ ನಂತರ ಸ್ಪರ್ಧಿಗಳೆಲ್ಲರೂ ಅಲ್ಲಲ್ಲಿ ಗುಂಪುಗುಂಪಾಗಿ ಕುಳಿತು ಆಟದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಈ ವೇಳೆ ಮಾತಿಗಿಳಿದ ಅರವಿಂದ್, ಶುಭಾ, ನಿಧಿ ಮತ್ತು ಮಂಜು… ಪ್ರಶಾಂತ್ ಅವರ ಬಗ್ಗೆ ವಿಮರ್ಶೆ ಮಾಡಲು ಮುಂದಾಗಿದ್ದಾರೆ.
ಅರವಿಂದ್, ಪ್ರಶಾಂತ್ ಅವರು ಟಾಸ್ಕ್ ಎಂದು ಬಂದಾಗ ಸರಿಯಾಗಿ ಆಟವಾಡುವುದಿಲ್ಲ. ಬೇರೆ ಟೈಮ್‍ನಲ್ಲಿ ಮಾತ್ರ ಎಲ್ಲಾ ತರಹದ ಮಾತುಗಳು ಕೂಡ ಅವರ ಬಾಯಲ್ಲಿ ಬರುತ್ತದೆ. ಗೇಮ್ ಬಗ್ಗೆ ಹಲವು ಬಗೆಯ ವಿಮರ್ಶೆಗಳನ್ನು ಮಾತನಾಡುತ್ತಾರೆ. ಆದರೆ ಅವರ ಸರದಿ ಬಂದಾಗ ಆಟದಲ್ಲಿ ಸರಿಯಾಗಿ ಆಟವಾಡುವುದಿಲ್ಲ ಎಂದಿದ್ದಾರೆ. ಇದಕ್ಕೆ ನಿಧಿ ಹಾಗೂ ಶುಭಾ ದನಿಗೂಡಿಸಿದ್ದಾರೆ.
ನಂತರ ಮಾತು ಪ್ರಾರಂಭಿಸಿದ ಮಂಜು, ಪ್ರಶಾಂತ್ ಅವರ ಸಮಸ್ಯೆ ಏನು ಗೊತ್ತಾ? ಗುಂಪಿನಲ್ಲಿ ಟಾಸ್ಕ್ ಕೊಟ್ಟರೆ ಅವರು ಯಾವುದನ್ನು ಬೇಕಾದರು ಮಾಡಲು ರೆಡಿ. ಆದರೆ ಒಬ್ಬರೇ ಮಾಡುವ ಟಾಸ್ಕ್ ಕೊಟ್ಟರೆ ಅವರ ಅಪ್ಪನ ಆಣೆ ಮಾಡುವುದಿಲ್ಲ. ಅವರು ಮಾತಿನಲ್ಲಿ ಮಾತ್ರ ಇತರರಿಗೆ ಹಲವು ರೀತಿಯ ಚಮಕ್ ಕೊಡುತ್ತಾರೆ ಎಂದರು.
ಈ ಸಂದರ್ಭ ಹಿಂದಿನ ಕೆಲವು ಟಾಸ್ಕ್‍ಗಳು ಮುಗಿದ ನಂತರ ಸಂಬರ್ಗಿ ಹೇಳಿದ ಕೆಲವು ಮಾತುಗಳನ್ನು ನಿಧಿ ನೆನಪಿಸಿಕೊಂಡು ನಕ್ಕರು. ಸಂಬರ್ಗಿ ಕರ್ನಾಟಕದಲ್ಲಿ ಸಮಸ್ಯೆ ಬಂದಾಗ ಯಾವ ರೀತಿ ಧ್ವನಿ ಎತ್ತುತ್ತಿದ್ದರೋ ಅದೇ ರೀತಿ ಬಿಗ್ ಮನೆಯಲ್ಲೂ ದನಿ ಎತ್ತುತ್ತಿದ್ದಾರೆ. ಇದನ್ನು ನೋಡುತ್ತಿರುವ ಕೆಲವು ಸ್ಪರ್ಧಿಗಳ ಮನದಲ್ಲಿ ಬೇಸರ ಹೊಗೆಯಾಡುತ್ತಿದೆ.