ಕೊಯಂಬತ್ತೂರು: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದು, ಆದರೆ ಅದಕ್ಕೆ ಗರ್ಭಿಣಿ ಮಗಳು ಬಲಿಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕಿನ ಮದಯ್ಯ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಅರುಣಾಚಲಂ(50) ಹಾಗೂ ಮೃತ ದುರ್ದೈವಿಯನ್ನು ವೆಂಕಟಲಕ್ಷ್ಮಿ ಎಂದು ಗುರುತಿಸಲಾಗಿದೆ. ವೆಂಕಟಲಕ್ಷ್ಮಿ 3 ತಿಂಗಳ ಗರ್ಭಿಣಿ. 4 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವೆಂಕಟಲಕ್ಷ್ಮಿ ಪತಿ ಶ್ರೀನಿವಾಸ್ ಜೊತೆ ಯುಗಾದಿ ಹಬ್ಬ ಆಚರಿಸಲು ತನ್ನ ತವರು ಮನೆಗೆ ಬಂದಿದ್ದಾಳೆ.
ಅಂತೆಯೇ ಮನೆಯವರೆಲ್ಲರೂ ಯುಗಾದಿ ಹಬ್ಬವನ್ನು ಬಹಳ ಸಂಭ್ರಮ, ಸಡಗರದಿಂದಲೇ ಆಚರಿಸಿದ್ದರು. ಆದರೆ ವಿಪರೀತ ಮದ್ಯವ್ಯಸನಿಯಾಗಿರುವ ಅರುಣಾಚಲಂ ಹಬ್ಬದ ಸಡಗರ ಮರೆ ಮಾಚುವ ಮುನ್ನವೇ ಮನೆ ಮಂದಿಗೆ ಶಾಕ್ ನೀಡಿದ್ದಾನೆ.
ಹಬ್ಬ ಆಚರಿಸಿದ ಮರುದಿನ ಅಂದರೆ ಬುಧವಾರ ಅರುಣಾಚಲಂ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಅಲ್ಲದೆ ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದಿದ್ದಾನೆ. ಈ ಜಗಳ ತಾರಕಕ್ಕೇರಿ ಪತ್ನಿಯನ್ನು ಕೊಲೆ ಮಾಡಲು ಹೋಗಿ ತನ್ನ ಮಗಳನ್ನೇ ಕೊಂದಿದ್ದಾನೆ.
ಸದ್ಯ ಘಟನೆ ಸಂಬಂಧ ಆರೋಪಿ ತಲಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.