ಜೋಡಿ ಕೊಲೆ ಮಾಡಿ ಕೋಳಿ ಫಾರಂನಲ್ಲಿ ಅಡಗಿದ್ದ ಹಂತಕರು – ಪೊಲೀಸರಿಂದ ಗುಂಡೇಟು

Public TV
2 Min Read

– ಲಾಕ್‍ಡೌನ್ ವೇಳೆ ಊರಿಗೆ ಬಂದು ಹಣಕ್ಕಾಗಿ ಮರ್ಡರ್
– ಇನ್ಸ್‍ಪೆಕ್ಟರ್ ಮೇಲೆ ಚಾಕುವಿನಿಂದ ದಾಳಿ

ಹಾಸನ: ಚನ್ನರಾಯಪಟ್ಟಣದ ಆಲಗೊಂಡನಹಳ್ಳಿಯಲ್ಲಿ ವೃದ್ಧ ದಂಪತಿಗಳನ್ನು ಹತ್ಯೆ ಮಾಡಿ ಕೋಳಿ ಫಾರಂನಲ್ಲಿ ಅಡಗಿದ್ದ ಕೊಲೆಗಾರನ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ.

ಆರೋಪಿ ಪ್ರಸಾದ್ ಅಲಿಯಾಸ್ ಗುಂಡನ ಎಡಗಾಲಿನ ಮಂಡಿ ಭಾಗಕ್ಕೆ ಗುಂಡೇಟು ಹೊಡೆಯಲಾಗಿದೆ. ಆಲಗೊಂಡನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಮುರುಳಿಧರ್ (71), ಉಮಾದೇವಿ (67) ಅವರನ್ನು ಎರಡು ದಿನಗಳ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸದಂತೆ ಈಗ ಇಬ್ಬರನ್ನು ಬಂಧಿಸಲಾಗಿದೆ.

ಕೋಳಿ ಫಾರಂನಲ್ಲಿ ಆರೋಪಿಗಳು ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಜೊತೆಗೆ ಶರಣಾಗುವಂತೆ ಮನವಿ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿಗಳು ಬಂಧಿಸಲು ಮುಂದಾದ ಇನ್ಸ್ ಪೆಕ್ಟರ್ ವಿನಯ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಆಗ ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಮತ್ತೊಬ್ಬ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ಮಾಡಿದ್ದಾರೆ. ವಿನಯ್ ಅವರ ಎಡಗೈಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಲಾಕ್‍ಡೌನ್ ಸಮಯದಲ್ಲಿ ಊರಿಗೆ ಬಂದಿದ್ದ ಆರೋಪಿಗಳು ದುಡ್ಡಿಗಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. 80 ಎಕ್ರೆ ಜಮೀನು ಹೊಂದಿದ್ದ ಮುರುಳಿಧರ್ ಅವರಿಗೆ ಮಕ್ಕಳಿರಲಿಲ್ಲ. ಅವರು ಆ ಜಮೀನನ್ನು ಮಾರಿ ಮನೆಯಲ್ಲಿ ದುಡ್ಡು ಇಟ್ಟಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಆರೋಪಿಗಳು ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ವೃದ್ಧ ದಂಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಎರಡು ದಿನಗಳ ಹಿಂದೆ ಜೋಡಿ ಕೊಲೆಯಾಗಿತ್ತು. ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ನಮ್ಮ ಪೊಲೀಸರು ತೆರಳಿದ್ದರು. ಸ್ಥಳಕ್ಕೆ ತೆರಳಿದ ವೇಳೆ ಆರೋಪಿ ಶರಣಾಗುವಂತೆ ಪೊಲೀಸರು ಹೇಳಿದ್ದಾರೆ. ಆದರೆ ಆರೋಪಿ ಶರಣಾಗದೇ ಪೊಲೀಸರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ನಮ್ಮ ಪೊಲೀಸರು ಫೈರಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಆರೋಪಿ ಮತ್ತು ಸಿಪಿಐ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಆರೋಗ್ಯದಲ್ಲೂ ಚೇತರಿಕೆ ಕಂಡು ಬಂದಿದೆ. ಸರಣಿ ಕೊಲೆಯಾಗುತ್ತಿರುವ ಚನ್ನರಾಯಪಟ್ಟಣ ಸೇರಿ ಎಲ್ಲೆಡೆ ಗಂಭೀರ ಕ್ರಮ ಕೈಗೊಂಡು ನಿಗಾ ವಹಿಸಿದ್ದೇವೆ. ಒಟ್ಟು ಈಗ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ. ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *