ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನ!

Public TV
1 Min Read

– ಸಾಮಾಜಿಕ ಅಂತರ ಪಾಲನೆ ಹಿನ್ನೆಲೆ ಸಿಬ್ಬಂದಿ, ಸ್ಥಳೀಯರಿಗೆ ಮಾತ್ರ ಅವಕಾಶ

ಹೈದರಾಬಾದ್: ಕೊರೊನಾ ಹಿನ್ನೆಲೆಯಲ್ಲಿ ಕಳೆದ 70 ದಿನಗಳಿಂದ ಬಂದ್ ಆಗಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನವನ್ನು ಓಪನ್ ಮಾಡಲು ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ.

ಜೂನ್ 8ರಿಂದ ದೇವಾಲಯದಲ್ಲಿ ದರ್ಶನ ಆರಂಭವಾಗಲಿದ್ದು, ಆದರೆ ಟಿಟಿಡಿ ಸಿಬ್ಬಂದಿ ಮತ್ತು ಸ್ಥಳೀಯರಿಗೆ ಮಾತ್ರ ಪ್ರಯೋಗಾತ್ಮಕವಾಗಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ಸಾಮಾನ್ಯ ಭಕ್ತರಿಗೆ ಯಾವಾಗ ಅವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ತಿಮ್ಮಪ್ಪನ ದರ್ಶನ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು, ಗಂಟೆಗೆ 300 ಭಕ್ತರಿಗೆ ಮಾತ್ರ ದರ್ಶನ ಕಲ್ಪಿಸಲು ಟಿಟಿಡಿ ಸಿದ್ಧತೆ ನಡೆಸಿದೆ.

ಟಿಟಿಡಿ ಮಂಡಳಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ಕಾರ ಪ್ರಯೋಗಾತ್ಮಕವಾಗಿ ದರ್ಶನ ವ್ಯವಸ್ಥೆಯನ್ನು ನಡೆಸಲು ಅನುಮತಿ ನೀಡಿದೆ. ಲಾಕ್‍ಡೌನ್ ನಿಯಮಗಳಿಂದ ವಿನಾಯಿಸತಿ ಸಿಕ್ಕ ಮೊದಲ ಭಾಗದ ಹಿನ್ನೆಲೆಯಲ್ಲಿ ದೇಶದ ವಿವಿಧ ದೇವಾಲಯಗಳು ಭಕ್ತರಿಗೆ ದರ್ಶನ ನೀಡಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಆದರೆ ಆಂಧ್ರ ಪ್ರದೇಶ ಸರ್ಕಾರ ಲಾಕ್‍ಡೌನ್ ಸಡಿಲಿಕೆಯ ಫೇಸ್-1 ಕುರಿತು ಇದುವರೆಗೂ ಯಾವುದೇ ನಿಯಮಾವಳಿಗಳನ್ನು ಬಿಡುಗಡೆಗೊಳಿಸಿಲ್ಲ.

ಕೇಂದ್ರ ಸರ್ಕಾರ ಹಾಗೂ ಸಚಿವಾಲಯ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಶ್ರೀವಾರಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಮಗೆ ಭಕ್ತರಿಂದ ಸಾಕಷ್ಟು ಇ-ಮೇಲ್, ಸಂದೇಶಗಳು ಬರುತ್ತಿದ್ದು, ದೇವರ ದರ್ಶನ ಆರಂಭದ ಕುರಿತು ಮಾಹಿತಿ ಕೇಳುತ್ತಿದ್ದಾರೆ. ಆದರೆ ಸರ್ಕಾರದ ನೀಡುವ ಲಾಕ್‍ಡೌನ್ ನಿರ್ದೇಶನಗಳ ಮೇಲೆ ಎಲ್ಲವೂ ಆಧಾರವಾಗಿರುತ್ತದೆ. ಮಾರ್ಚ್ 19 ರಿಂದ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲದಿರುವುದರಿಂದ ಪ್ರತಿ ತಿಂಗಳು 200 ಕೋಟಿ ರೂ. ನಷ್ಟ ಎದುರಾಗಿದೆ ಎಂದು ತಿಳಿಸಿದ್ದಾರೆ. ಇತ್ತ ಆದಾಯಕ್ಕೆ ಹೊಡೆತ ಬಿದ್ದ ಪರಿಣಾಮ ಟಿಟಿಡಿ ಸಿಬ್ಬಂದಿಯ ವೇತನ ನೀಡಲು ಸಮಸ್ಯೆ ಎದುರಿಸಿದೆ. ಪ್ರತಿದಿನ ಭಕ್ತರು ದೇವರ ಹುಂಡಿಗೆ ಸಲ್ಲಿಸುತ್ತಿದ್ದ ಕಾಣಿಕೆಗಳು ದೇವಾಲಯದ ಪ್ರಮುಖ ಆದಾಯದ ಮೂಲವಾಗಿತ್ತು. ಹುಂಡಿಯಲ್ಲಿ ಪ್ರತಿದಿನ 50 ಲಕ್ಷ ರೂ. ಆದಾಯ ಲಭಿಸುತ್ತಿತ್ತು.

Share This Article
Leave a Comment

Leave a Reply

Your email address will not be published. Required fields are marked *