ಜೂನ್ 7ರ ಬಳಿಕವೂ ರಾಜ್ಯದಲ್ಲಿ ಲಾಕ್‍ಡೌನ್ ವಿಸ್ತರಣೆಯಾಗುತ್ತಾ..?

Public TV
3 Min Read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾವು ನಿಲ್ತಿಲ್ಲ, ಪಾಸಿಟಿವಿಟಿ ರೇಟ್ ಇಳಿಯುತ್ತಿಲ್ಲ. ಹಾಗಾದ್ರೆ ಜೂನ್ 7ಕ್ಕೆ ಲಾಕ್‍ಡೌನ್ ಮುಗಿಯಲ್ವಾ ಎಂಬ ಪ್ರಶ್ನೆಯೊಂದು ಎದ್ದಿದೆ.

ಬಹಳಷ್ಟು ಮಂದಿ ಜೂನ್ 7ಕ್ಕೆ ಮನೆವಾಸ ಅಂತ್ಯ ಆಗುತ್ತೆ ಅನ್ನೋ ಕನಸು ಕಾಣುತ್ತಿದ್ದಾರೆ. ಆದರೆ ಜೂನ್ 7ರಂದು ರಾಜ್ಯ ಅನ್‍ಲಾಕ್ ಆಗೋದು ಡೌಟೇ. ಕೊರೊನಾ ಮೊದಲ ಅಲೆಯಲ್ಲಿ ಭಾರತ ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಅಂದ್ರೆ ಬರೋಬ್ಬರಿ 75 ದಿನಗಳ ಕಾಲ ಲಾಕ್‍ಡೌನ್ ಶಿಕ್ಷೆ ಅನುಭವಿಸಿತ್ತು. ಆದರೆ ಈಗ ಒಂದು ವರ್ಷದ ಕೇಸುಗಳು ಎರಡೆರಡು ತಿಂಗಳಲ್ಲೇ ಕಾಡೋಕೆ ಶುರುವಾಗಿದೆ. ಅದೂ ಕೂಡ ನಿರೀಕ್ಷಿಸಲಾಗದಷ್ಟೂ ಗಂಭೀರ ಪರಿಸ್ಥಿತಿಯಲ್ಲಿ. ಹೀಗಿರುವಾಗ ಕೇವಲ 43 ದಿನದಲ್ಲೆಲ್ಲಾ ರಾಜ್ಯವನ್ನ ಅನ್‍ಲಾಕ್ ಮಾಡಿದ್ರೆ ಮತ್ತೆ ಇನ್ನಷ್ಟು ಅಪಾಯಗಳನ್ನ ಎದುರಿಸಬೇಕಾಗುತ್ತದೆ ಅನ್ನೋದು ತಜ್ಞರ ಸಲಹೆ ಆಗಿದೆ. ಸರ್ಕಾರ ಕೂಡ ಜೂನ್ 7ರ ಬಳಿಕವೂ ಲಾಕ್‍ಡೌನ್ ಮುಂದುವರಿಸುವ ಚಿಂತನೆಯಲ್ಲಿದೆ.

ತಜ್ಞರ ಸಲಹೆಗಳನ್ನ ಆಧರಿಸಿ ಹೇಳೋದಾದ್ರೆ ಸದ್ಯಕ್ಕೆ ಜೂನ್ 7ಕ್ಕೂ ಲಾಕ್‍ಡೌನ್ ಮುಗಿಯೋ ಗ್ಯಾರಂಟಿ ಇಲ್ಲ. ಯಾಕಂದ್ರೆ ಕೊರೊನಾ ಸೋಂಕು ಏನೋ ತ್ಗುತ್ತಿದೆ ನಿಜ. ಆದರೆ ಸಾವಿನ ಸಂಖ್ಯೆ ಏರ್ತಿದೆ. ಅಷ್ಟೆ ಅಲ್ಲ ಬೆಂಗಳೂರು ಒಂದರಲ್ಲೇ ಆಸ್ಪತ್ರೆಗೆ ದಾಖಲಾಗಿರುವ ಶೇ.70 ರಷ್ಟು ರೋಗಿಗಗಳು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಐಸಿಯು ಬೆಡ್‍ನಲ್ಲಿದ್ದರೂ ಗುಣಮುಖರಾಗಲು ಬಹಳ ಟೈಂ ಹಿಡೀತಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಬೆಡ್‍ಗಳು ಸಿಗ್ತಿಲ್ಲ. ಪರಿಣಾಮ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆಯೂ ಕೂಡ ಹೆಚ್ಚಿದೆ. ಇದೆಲ್ಲಾ ಗಮನಿಸಿಯೇ ತಜ್ಞರು ಯಾವಾಗ ಲಾಕ್‍ಡೌನ್ ತೆರವು ಮಾಡಬಹುದು ಅನ್ನೋದರ ಬಗ್ಗೆ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ.

ಸರ್ಕಾರಕ್ಕೆ ತಜ್ಞರ ‘ಲಾಕ್’ ರಿಪೋರ್ಟ್..!
ಸೋಂಕಿನ ಪ್ರಮಾಣ ಶೇ.5ಕ್ಕೆ ಇಳಿಯದೇ ಲಾಕ್‍ಡೌನ್ ತೆಗೆಯಬಾರದು ಅಂತ ಐಸಿಎಂಆರ್ ಹೇಳಿದೆ. ಸೋಂಕಿನ ಪ್ರಮಾಣ ಶೇ.10ರಷ್ಟಿದ್ದರೆ ಸರ್ಕಾರ ಲಾಕ್‍ಡೌನ್ ಮುಂದುವರಿಸಬಹುದು. ಸೋಂಕಿನ ಪ್ರಮಾಣ ಶೇ.8ಕ್ಕೆ ಇಳಿದರೆ ಲಾಕ್‍ಡೌನ್‍ನಿಂದ ಒಂದಿಷ್ಟು ಸಡಿಲಿಕೆ ಸಾಧ್ಯತೆ ಇದೆ. ಬೆಂಗಳೂರಲ್ಲಿ ಸೋಂಕು ಇಳಿದರೂ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಜಿಲ್ಲೆಗಳಲ್ಲೂ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಳ ಆಗ್ತಿದೆ. ಸೋಂಕು, ಸಾವಿನ ಪ್ರಮಾಣ ಆಧರಿಸಿ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ತಜ್ಞರು ಹೀಗೆ ತಮ್ಮ ವರದಿ ಕೊಡ್ತಿದ್ದಾಗೆ ಇತ್ತ ಸಚಿವರು ಕೂಡ ಈಗಲೇ ಲಾಕ್‍ಡೌನ್ ಓಪನ್ ಮಾಡೋದು ಬೇಡ ಅಂತ ಸಿಎಂಗೆ ಸಲಹೆ ನೀಡಲು ಶುರುವಾಗಿದ್ದಾರಂತೆ. ಹೀಗಾಗಿ ಜೂನ್ 7ಕ್ಕೂ ಲಾಕ್ ಓಪನ್ ಆಗೋದು ಅನುಮಾನವಾಗಿದೆ.

ಸರ್ಕಾರ ಏನಾದ್ರೂ ಆರ್ಥಿಕ ಅಭಿವೃದ್ಧಿಯ ದೃಷ್ಠಿಯಿಂದ ಲಾಕ್‍ಡೌನ್ ಓಪನ್ ಮಾಡೋಣ ಅಂತ ಮನಸ್ಸು ಮಾಡಿದ್ರೂ ಅದಕ್ಕೂ ತಜ್ಞರು ಬೇರೆಯದ್ದೇ ರೀತಿಯಲ್ಲಿ ಆಪ್ಶನ್ ಕೊಟ್ಟಿದ್ದಾರೆ. ಅನ್‍ಲಾಕ್ ಮಾಡೋದಾದ್ರೆ ಯಾವುದೇ ಕಾರಣಕ್ಕೂ ಒಟ್ಟಿಗೇ ಮಾಡೋಕೆ ಹೋಗಬೇಡಿ. ಹಾಗೇನಾದ್ರೂ ಮಾಡಿದ್ರೆ ಇಷ್ಟು ದಿನ ಪಟ್ಟ ಕಷ್ಟವೆಲ್ಲಾ ವ್ಯರ್ಥ ಆಗಲಿದೆ. ಲಾಕ್‍ಡೌನ್ ರಿಸಲ್ಟ್ ಈಗಷ್ಟೇ ಸಿಗ್ತಿದೆ. ಹೀಗಿರೋವಾಗ ಜೂನ್ 7ರ ಬಳಿಕ ಒಟ್ಟಿಗೇ ಅನ್‍ಲಾಕ್ ಮಾಡಿದ್ರೆ ಮತ್ತೆ ಒಂದೇ ಸಮನೆ ಕೊರೋನಾ ಕೇಸ್‍ಗಳು ದುತ್ತನೇ ಉದ್ಭವ ಆದ್ರೂ ಆಚ್ಚರಿ ಇಲ್ಲ ಅಂತಿದ್ದಾರೆ.

ಜೂನ್ 7ರ ಬಳಿಕ ಏಕಾಏಕಿ ಲಾಕ್‍ಡೌನ್ ವಿನಾಯ್ತಿ ಬೇಡ. ಜೂನ್ 7ರ ಬಳಿಕ 14 ದಿನ ಅರ್ಧ ಲಾಕ್‍ಡೌನ್ ಜಾರಿಗೆ ತನ್ನಿ. ಜೂನ್ 7ರ ಬಳಿಕ ಬೆರಳೆಣಿಕೆಯಷ್ಟು ವಿನಾಯ್ತಿಯಷ್ಟೇ ಇರಲಿ. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನದವರೆಗಷ್ಟೇ ವಿನಾಯ್ತಿ ಕೊಡಿ. ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ ಮುಂದುವರಿಯಲಿ. ಜೂನ್ 7ರ ಬಳಿಕ 14 ದಿನ ನೈಟ್‍ಕಫ್ರ್ಯೂ ಜಾರಿಗೆ ತನ್ನಿ. ಮದ್ವೆಗಳ ಮೇಲಿನ ನಿರ್ಬಂಧ ತೆಗೆಯುವುದು ಬೇಡ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದೆಲ್ಲದರ ಬಗ್ಗೆ ಗುರುವಾರ ತಜ್ಞರು ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಹೀಗೆ ವರದಿ ನೀಡೋ ಮುನ್ನ ಮೇ 10 ರಿಂದ ಪತ್ತೆ ಆಗಿರೋ ಸೋಂಕಿನ ಸಂಖ್ಯೆಯನ್ನು ಆಧರಿಸಿ ವರದಿ ನೀಡಲಿದ್ದು ಲಾಕ್‍ಡೌನ್ ಮುಂದುವರಿಸಬೇಕೇ ಬೇಡವೇ ಅನ್ನೋದರ ಬಗ್ಗೆಯೂ ಸಲಹೆ ಹಾಗೂ ಶಿಫಾರಸುಗಳನ್ನು ಮಾಡಲಿದ್ದಾರಂತೆ.

ಬೆಂಗಳೂರಲ್ಲಿ ಸೋಂಕು ಇಳಿದಿದೆ, ಆದ್ರೆ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಹಳ್ಳಿಗಳಲ್ಲಿ ಸೋಂಕು, ಸಾವಿನ ಪ್ರಮಾಣ ಎರಡೂ ಏರಿಕೆಯಾಗ್ತಿದೆ. ಈಗಲೇ ಲಾಕ್‍ಡೌನ್‍ನಿಂದ ಏಕಾಏಕಿ ವಿನಾಯ್ತಿ ಕೊಡುವುದು ಬೇಡ. ಏಕಾಏಕಿ ವಿನಾಯ್ತಿ ಕೊಟ್ಟರೆ ಜನರ ಓಡಾಟ ಹೆಚ್ಚಳದ ಆತಂಕ ಇದೆ. ಹೀಗಾಗಿ ಲಾಕ್ ಡೌನ್ ಸಡಿಲಿಕೆಯೂ ಬೇಡ ಎಮದು ತಜ್ಞರು ಹೇಳಿದ್ದಾರೆ.

ಸದ್ಯ ಸರ್ಕಾರ ಈ ಲಾಕ್‍ಡೌನ್ ಇನ್ನೂ 14 ದಿನ ಹೀಗೆ ಮುಂದುವರೆಸೋದಾ ಅಥವಾ ಹಂತ ಹಂತವಾಗಿ ಕೆಲವರನ್ನ ಮಾತ್ರ ಲಾಕ್‍ಡೌನಿಂದ ಮುಕ್ತ ಮಾಡೋದಾ ಅನ್ನೋ ಚರ್ಚೆಯಲ್ಲಿದೆ. ಹೀಗಾಗಿ ಜೂನ್ 7ರ ಬಳಿಕ ಎರಡು ವಾರಗಳ ಕಾಲ ಲಾಕ್‍ಡೌನ್ ಮುಂದುವರೆದ್ರೂ ಅಚ್ಚರಿ ಇಲ್ಲ. ಸದ್ಯ ಈಗ ಸರ್ಕಾರ ತಜ್ಞರ ಮಾತು ನಿರಾಕರಿಸೋ ಸ್ಥಿತಿಯಲ್ಲೂ ಇಲ್ಲ. ಹಾಗಾಗಿ ಒಂದು ವೇಳೆ ತಜ್ಞರ ಇನ್ನೆರಡು ವಾರ ಲಾಕ್‍ಗೆ ಕಿವಿಗೊಟ್ಟಿದ್ದೇ ಆದ್ರೆ ಜೂನ್ ಅಂತ್ಯದವರೆಗೂ ಲಾಕ್ ಆದ್ರೂ ಅಚ್ಚರಿ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *