ಜಿ.ಮಾದೇಗೌಡರು ಪಂಚಭೂತಗಳಲ್ಲಿ ಲೀನ

Public TV
1 Min Read

ಮಂಡ್ಯ: ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ.ಮಾದೇಗೌಡ ಅವರ ಅಂತ್ಯಕ್ರಿಯೆಯನ್ನು ಜಿಲ್ಲೆಯ ಮದ್ದೂರು ತಾಲೂಕಿನ ಹನುಮಂತನಗರದಲ್ಲಿ ನೆರವೇರಿಸಲಾಯಿತು.

ಕೆ.ಎಂ.ದೊಡ್ಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಒಕ್ಕಲಿಗ ಸಂಪ್ರದಾಯದಂತೆ ಹನುಮಂತನಗರದಲ್ಲಿರುವ ಮಾದೇಗೌಡರಗೌಡರ ವಿದ್ಯಾರ್ಥಿ ಗೃಹದ ಕ್ರೀಡಾಂಗಣದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಮಾದೇಗೌಡರ ಪುತ್ರ ಡಾ.ಪ್ರಕಾಶ್ ಅಂತಿಮ ವಿಧಿ ವಿಧಾನ ನೆರವೇರಿಸಿದ್ದು, ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು.

ಜಿ.ಮಾದೇಗೌಡರ ಕುಟುಂಬಸ್ಥರಿಂದ ಪೂಜೆ, ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಪೊಲೀಸರಿಂದ ಗೌರವ ವಂದನೆ, ಜಿ.ಮಾದೇಗೌಡರಿಗೆ ರಾಷ್ಟ್ರಧ್ವಜ ಹೊದಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಸೇರಿದಂತೆ ಗಣ್ಯರಿಂದ ಗೌರವ ವಂದನೆ ಸಲ್ಲಿಸಲಾಯಿತು. ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಂಡಿ, ಸಿದ್ದೇಗೌಡ ಇದ್ದರು.

ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಂಸದ ಜಿ.ಮಾದೇಗೌಡ (92) ಶನಿವಾರ ವಿಧಿವಶರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಮಾದೇಗೌಡರು ಅವರು ನಿಧನರಾಗಿದ್ದರು.

ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ನಾಯಕರು, ಕಾವೇರಿ ಹೋರಾಟಗಾರರು, ಮಾಜಿ ಲೋಕಸಭಾ ಸದಸ್ಯರು ಹಾಗೂ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ತೀವ್ರ ಅನಾರೋಗ್ಯದಿಂದ ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಶಾಸನಸಭೆ, ಲೋಕಸಭಾ ಸದಸ್ಯರಾಗಿ, ರೈತ ಪರ ಹೋರಾಟಗಾರರಾಗಿ ಜಿಲ್ಲೆಯ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ರವರ ಜೊತೆ ಶ್ರಮಿಸಿದವರು. ಮಂಡ್ಯದಲ್ಲಿ ಗಾಂಧಿ ಭವನ ನಿರ್ಮಿಸಿದ್ದರು. ಈ ಹಿಂದೆ ಮಾದೇಗೌಡರೊಂದಿಗೆ ಪ್ರಥಮ ಬಾರಿಗೆ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಎಸ್.ಎಂ.ಕೃಷ್ಣ ರವರು ತಮ್ಮ ಬಹುಕಾಲದ ಒಡನಾಡಿಯ ಆರೋಗ್ಯ ವಿಚಾರಿಸಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *